ADVERTISEMENT

ವದಂತಿಗೆ ಕಿವಿಗೊಡದಿರಿ: ವಿಶ್ವನಾಥ್

ಪಾದಯಾತ್ರೆಗೆ 1 ಸಾವಿರ, ಸಮಾವೇಶಕ್ಕೆ 20 ಸಾವಿರ ಮಂದಿ ಸಂಘಟಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:43 IST
Last Updated 21 ಜನವರಿ 2021, 2:43 IST
ವಿದ್ಯಾರಣ್ಯಪುರಂನ ನಿತ್ಯಾನಂದ ಕಲ್ಯಾಣಮಂಟಪದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕುರುಬರ ಎಸ್.ಟಿ.ಹೋರಾಟ ಸಮಿತಿಯ ನೇತೃತ್ವದಲ್ಲಿ ಮುಖಂಡರ ಸಭೆ ನಡೆಯಿತು
ವಿದ್ಯಾರಣ್ಯಪುರಂನ ನಿತ್ಯಾನಂದ ಕಲ್ಯಾಣಮಂಟಪದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕುರುಬರ ಎಸ್.ಟಿ.ಹೋರಾಟ ಸಮಿತಿಯ ನೇತೃತ್ವದಲ್ಲಿ ಮುಖಂಡರ ಸಭೆ ನಡೆಯಿತು   

ಮೈಸೂರು: ‘ಸಿದ್ದರಾಮಯ್ಯ ಅವರು ಕುರುಬ ಸಮುದಾಯವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹರಿಹಾಯ್ದರು.‌

ವಿದ್ಯಾರಣ್ಯಪುರಂನ ನಿತ್ಯಾನಂದ ಕಲ್ಯಾಣಮಂಟಪದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕುರುಬರ ಎಸ್.ಟಿ.ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಎಸ್.ಟಿ ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಇದೆ ಎಂದು ಹೇಳುವ ಮೂಲಕ ಇಡೀ ಸಮುದಾಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮುದಾಯದ ಜನರು ಇವರ ಮಾತಿಗೆ ಕಿವಿಗೊಡಬಾರದು, ವದಂತಿಗಳಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದರು.‌

ADVERTISEMENT

ಸಮುದಾಯದ ಜನರ ದಿಕ್ಕು ತಪ್ಪಿಸುತ್ತಿರುವ ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ಏಳಿಗೆಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮುಖಂಡರಿಗೆ ಸ್ಥಾನ ಕೊಡಲಿಲ್ಲ. 2ನೇ ತಲೆಮಾರಿನ ನಾಯಕತ್ವ ಬೆಳೆಸಲಿಲ್ಲ ಎಂದು ಕಿಡಿಕಾರಿದರು.

ಸಮುದಾಯದ ಮಠ ಕಟ್ಟುವಾಗ ಸಿದ್ದರಾಮಯ್ಯ ಆರ್‌ಎಸ್‌ಎಸ್ ವ್ಯಕ್ತಿಯನ್ನು ಏತಕ್ಕೆ ಮಠಾಧೀಶರನ್ನಾಗಿ ಮಾಡುತ್ತೀರ ಎಂದು ಪ್ರಶ್ನಿಸಿದ್ದರು. ಸ್ವಾಮೀಜಿ ಪಟ್ಟಾಭಿಷೇಕದಲ್ಲೂ ಅವರು ಭಾಗವಹಿಸಲಿಲ್ಲ. ಮಠದ ಬೆಳವಣಿಗೆಗೆ ಹತ್ತು ಪೈಸೆ ಕೊಡುಗೆಯನ್ನೂ ಅವರು ನೀಡಿಲ್ಲ ಎಂದು ಹೇಳಿದರು.

ಫೆ. 3ರಂದು ನೆಲಮಂಗಲದ ಸಮೀಪ ನಡೆಯುವ ಪಾದಯಾತ್ರೆಗೆ 1 ಸಾವಿರ ಮಂದಿ ಹಾಗೂ ಫೆ. 7ರಂದು ಬೆಂಗಳೂರು ಸಮೀಪ ನಡೆಯುವ ಸಮಾವೇಶಕ್ಕೆ 15ರಿಂದ 20 ಸಾವಿರ ಮಂದಿ ಮೈಸೂರು ಭಾಗದಿಂದ ಭಾಗವಹಿಸುವಂತೆ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಮುದಾಯಕ್ಕೆ ಸೇರಿದ ಗ್ರಾಮ ಪಂಚಾಯಿತಿ ಸದಸ್ಯರು, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರು, ಪಾಲಿಕೆ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಗಳಲ್ಲಿ ಬಸ್‌ಗಳಲ್ಲಿ ಜನರನ್ನು ಪಾದಯಾತ್ರೆಗೆ ಹಾಗೂ ಸಮಾವೇಶಕ್ಕೆ ಕರೆದುಕೊಂಡು ಬರಬೇಕು ಎಂದು ನಿರ್ಣಯಿಸಲಾಯಿತು.

ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಕಾರ್ಯಾಧ್ಯಕ್ಷ ಮುಕುಡಪ್ಪ, ಖಜಾಂಚಿಗಳಾದ ಅಣ್ಣೇಗೌಡ, ಬಿ.ಎಂ.ರಘು, ಸಂಘಟನಾ ಕಾರ್ಯದರ್ಶಿಗಳಾದ ಜೋಗಿಮಂಜು, ಹರೀಶ್, ಮುಡಾ ಸದಸ್ಯ ನವೀನ್‌, ಶಂಕರ್, ಹಿನಕಲ್ ರಾಜು, ರಮೇಶ್ ಕುರುಬಾರಳ್ಳಿ, ಚಂದ್ರು, ಪಿರಿಯಾಪಟ್ಟಣ ಗಣೇಶ್,ಹುಣಸೂರು ಗಣೇಶ್, ಗುಂಡ್ಲುಪೇಟೆ ಹುಚ್ಚೇಗೌಡ, ಬೀರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.