ADVERTISEMENT

ಮೈಸೂರು: ಕೆರೆಯ ಒಡಲಿಗೆ ಒಳಚರಂಡಿ ನೀರು

ಕಲುಷಿತವಾಗುತ್ತಿರುವ ವರುಣಾ ಕೆರೆಯನ್ನು ರಕ್ಷಿಸುವವರು ಯಾರು?

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 0:58 IST
Last Updated 18 ಜನವರಿ 2021, 0:58 IST
ವರುಣಾ ಕೆರೆಗೆ ಚಿಕ್ಕಳ್ಳಿ ಗ್ರಾಮಕ್ಕೆ ಹೊಂದಿಕೊಂಡಿಂತಿರುವ ವರುಣಾ ಕಾಲುವೆಯಲ್ಲಿ ಹರಿಯುತ್ತಿರುವ ಮೋರಿ ನೀರು (ಎಡಚಿತ್ರ). ವಾಜಮಂಗಲ ರಸ್ತೆಯ ಹಿನ್ನೀರು ಭಾಗದಲ್ಲಿ ಸೇರುತ್ತಿರುವ ಒಳ ಚರಂಡಿ ನೀರು
ವರುಣಾ ಕೆರೆಗೆ ಚಿಕ್ಕಳ್ಳಿ ಗ್ರಾಮಕ್ಕೆ ಹೊಂದಿಕೊಂಡಿಂತಿರುವ ವರುಣಾ ಕಾಲುವೆಯಲ್ಲಿ ಹರಿಯುತ್ತಿರುವ ಮೋರಿ ನೀರು (ಎಡಚಿತ್ರ). ವಾಜಮಂಗಲ ರಸ್ತೆಯ ಹಿನ್ನೀರು ಭಾಗದಲ್ಲಿ ಸೇರುತ್ತಿರುವ ಒಳ ಚರಂಡಿ ನೀರು   

ವರುಣಾ: ನೂರಾರು ವರ್ಷಗಳ ಐತಿಹಾಸ ಇರುವ ಸ್ವಚ್ಛ ವರುಣಾ ಕೆರೆಗೆ ಅಕ್ಕ ಪಕ್ಕದ ಗ್ರಾಮ ಹಾಗೂ ಹೊಸ ಬಡಾವಣೆಗಳ ಒಳಚರಂಡಿ ಮತ್ತು ಮೋರಿ ನೀರು ಸೇರುತ್ತಿದ್ದು, ಮುಂದಿನ ದಿನಗಳಲ್ಲಿ ಶುದ್ಧ ಕೆರೆಯಾಗಿ ಉಳಿಯುವುದೇ ಎಂಬ ಆತಂಕ ಗ್ರಾಮಸ್ಥರ ಕಾಡುತ್ತಿದೆ.

ಈ ಕೆರೆಯು ಸುಮಾರು 100ಕ್ಕೂ ಹೆಚ್ಚು ಎಕರೆ ಪ್ರದೇಶ ಹೊಂದಿದೆ. ವರುಣಾ ನಾಲೆ ಮೂಲಕ ನೀರು ಸಂಗ್ರಹಿಸಿದ್ದರಿಂದ ವರ್ಷವಿಡಿ ಮೈದುಂಬಿರುತ್ತದೆ. ಹಲವು ವರ್ಷಗಳವರೆಗೆ ಕೆರೆಗೆ ಯಾವುದೇ ಬಡಾವಣೆ ನೀರು ಹರಿದು ಬರುತ್ತಿರಲಿಲ್ಲ. ಆದರೆ, ಈಗೀಗ ನಾಡನಹಳ್ಳಿ, ಭುಗತಹಳ್ಳಿ, ವಸಂತ ನಗರ, ಚಿಕ್ಕಹಳ್ಳಿ, ಚೊರನಹಳ್ಳಿ, ಹಂಚ್ಯಾ, ವಾಜಮಂಗಲ, ಯಾನದಹಳ್ಳಿ ಇನ್ನಿತರ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಹೊಸ ಬಡಾವಣೆ ನೀರು ಕೆರೆಗೆ ಬಂದು ಸೇರುತ್ತಿದೆ.

ಹೊಸ ಬಡಾವಣೆ ನಿರ್ಮಾಣವಾದ ಮೇಲೆ ಕೆರೆಗೆ ಮಳೆಗಾಲದಲ್ಲಿ ಹರಿದು ಬರುವ ಹಳ್ಳಗಳಿಗೆ ಮೋರಿ ನೀರು ಬಿಡುತ್ತಿರುವುದು ಸಾಮಾನ್ಯವಾಗಿದೆ. ಇನ್ನೂ ಶೇ 20 ಭಾಗದಷ್ಟು ಮಾತ್ರ ಮನೆಗಳ ನೀರು ಬರುತ್ತಿರಬಹುದು. ಆದರೆ ಭವಿಷ್ಯದಲ್ಲಿ ಿಬ್ಬೂ ಹೆಚ್ಚು ಮನೆಗಳು ನಿರ್ಮಾಣವಾದರೆ ಮತ್ತಷ್ಟು ನೀರು ಕುಲಷಿತವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ.

ADVERTISEMENT

‘ಚಿಕ್ಕಳ್ಳಿಯಲ್ಲಿ ಒಳ ಚರಂಡಿ ನೀರು ಸಂಗ್ರಹಣಾ ಘಟಕ (ಸೆಫ್ಟಿಕ್‌ ಟ್ಯಾಂಕ್) ಅಪೂರ್ಣವಾಗಿದೆ’ ಎನ್ನುತ್ತಾರೆ ನೂತನ ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ್.

ಕೆರೆಯಲ್ಲಿ ಮೊದಲು ಬಟ್ಟೆ, ಪಾತ್ರೆ, ದನಗಳನ್ನು ತೊಳೆಯುತ್ತಿದ್ದರು. ಈಗ ಕಲುಷಿತ ನೀರು ಕೆರೆಗೆ ಬರುತ್ತಿರುವುದರಿಮದ ಜನರು ಕೂಡಾ ಕೆರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ವಾಜಮಂಗಲದ ಮಂಜುನಾಥ್.

‘ಕೆರೆ ರಕ್ಷಣೆಗೆ ವರುಣಾ ಗ್ರಾಮಸ್ಥರು ಒಂದು ಸಮಿತಿ ರಚಿಸಿ ಅದರ ನಿರ್ವಹಣೆ ಮಾಡಿದರೆ ಮುಂದಾಗಬಹುದಾದ ತೊಂದರೆ, ಅನಾಹುತ ತಪ್ಪಿಸಲು ಸಾಧ್ಯ’ ಎಂದರು ಗ್ರಾಮದ ಮುಖಂಡ ವಿ.ಬಿ.ಮಹೇಶ್.

‘ವರುಣಾ ಕೆರೆಗೆ ಬರುತ್ತಿರುವ ಒಳ ಚರಂಡಿ ನೀರನ್ನು ಸ್ಥಗಿತಗೊಳಿಸಲು ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಎಪಿಎಂಸಿ ಸದಸ್ಯ ಜವರಯ್ಯ ಹೇಳಿದರು.

‘ಕೆರೆಯಲ್ಲಿ ಪಕ್ಷಿಗಳು ಹಾಗೂ ಜಲಚರಗಳಿಗೆ ಅಪಾಯವಾಗಬಹುದು’ ಎನ್ನುತ್ತಾರೆ ಔಟ್ ಬ್ಯಾಕ್ ಅಡ್ವೆಂಚರ್ ಜಲಕ್ರೀಡೆ ವ್ಯವಸ್ಥಾಪಕ ಅಬ್ದುಲ್ ಅಲಿಂ.

‘ವಾಜಮಂಗಲದಲ್ಲಿ ಈಗಾಗಲೇ ಮುಡಾದಿಂದ ಸುಮಾರು ₹ 20 ಲಕ್ಷ ವೆಚ್ಚದಲ್ಲಿ ಒಳ ಚರಂಡಿ ನೀರು ಸಂಗ್ರಹಣಾ ಘಟಕ (ಸೆಫ್ಟಿಕ್‌ ಟ್ಯಾಂಕ್) ಸ್ಥಾಪಿಸಲಾಗಿದೆ’ ಎನ್ನುತ್ತಾರೆ ಪಿಡಿಒ ಬಸವರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.