ರಾಷ್ಟ್ರಪತಿ ದ್ರೌಪದಿ
ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.1 ಹಾಗೂ 2ರಂದು ನಗರದಲ್ಲಿ ಪ್ರವಾಸ ಕೈಗೊಂಡಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನಗರದಲ್ಲಿ ವಾಸ್ತವ್ಯ ಹೂಡಿದ್ದು, ‘ಅತಿಗಣ್ಯರ ಸಂಚಾರ’ ಹೆಚ್ಚಿರುವ ಕಾರಣದಿಂದ ನಗರದಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ.
ಸೋಮವಾರ ಮಧ್ಯಾಹ್ನ 3.10ರ ಸುಮಾರಿಗೆ ರಾಷ್ಟ್ರಪತಿಯವರು ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಬಂದಿಳಿಯುವರು. ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಳ್ಳುವರು. ನಂತರ ರಾಷ್ತ್ರಪತಿಯವರು ವರ್ತುಲ ರಸ್ತೆಯ ಮೂಲಕ ನೇರವಾಗಿ ಮಾನಸಗಂಗೋತ್ರಿಯ ನೈಮಿಶಮ್ ಕ್ಯಾಂಪಸ್‌ನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಶ್)ಗೆ ತೆರಳಿ, ‘ವಜ್ರ ಮಹೋತ್ಸವ’ ಸಮಾರಂಭದಲ್ಲಿ ಭಾಗವಹಿಸುವರು. ಅಲ್ಲಿಗೆ ಸಾರ್ವಜನಿಕರು, ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲಿ ಸೋಮವಾರ ಯಾವುದೇ ಚಿಕಿತ್ಸೆಯೂ ಲಭ್ಯ ಇರುವುದಿಲ್ಲ. ಅಲ್ಲಿನ ಸಿಬ್ಬಂದಿಗೆ ರಜೆಯನ್ನೂ ಕೊಡಲಾಗಿದೆ.
ಸಮಾರಂಭದ ಬಳಿಕ ರಾಷ್ಟ್ರಪತಿಯವರು ಕುಕ್ಕರಹಳ್ಳಿ ಕೆರೆ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್ ವೃತ್ತದ ಮೂಲಕ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರ‍್ಯಾಡಿಸನ್ ಬ್ಲೂ ಹೋಟೆಲ್‌ಗೆ ತೆರಳುವರು. ರಾತ್ರಿ 8ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸುವರು. ಅಲ್ಲಿಂದ ಹೋಟೆಲ್‌ಗೆ ಬಂದು ವಾಸ್ತವ್ಯ ಹೂಡುವರು.
ಮಂಗಳವಾರ (ಸೆ.2) ಬೆಳಿಗ್ಗೆ 8.30ರ ಸುಮಾರಿಗೆ ಅರಮನೆಗೆ ಭೇಟಿ ನೀಡುವರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಕುಟುಂಬದೊಂದಿಗೆ ಉಪಾಹಾರ ಸೇವಿಸುವರು. ಬೆಳಿಗ್ಗೆ 10.20ರ ಸುಮಾರಿಗೆ ಮಂಡಕಳ್ಳಿ ವಿಮಾನನಿಲ್ದಾಣದಿಂದ ತೆರಳುವರು.
ನಗರದಲ್ಲಿ ಅವರು ಸಂಚರಿಸುವ ಮಾರ್ಗಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಇದಕ್ಕಾಗಿ 435 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲಲ್ಲಿ ಗುಂಡಿ ಉಂಟಾಗಿದ್ದ ರಸ್ತೆಗಳ ದುರಸ್ತಿಯನ್ನೂ ಮಾಡಲಾಗಿದೆ. ವಿಭಜಕಗಳಿಗೆ ಸುಣ್ಣ–ಬಣ್ಣ ಬಳಿದು ಅಲಂಕರಿಸಲಾಗಿದೆ.
ನಗರ ಪೊಲೀಸರು ಬೆಂಗಾವಲು ವಾಹನಗಳ ಸಹಿತ ‘ಪೂರ್ವಾಭ್ಯಾಸ’ವನ್ನೂ ನಡೆಸಿದ್ದಾರೆ. ಸೋಮವಾರ ಇಡೀ ದಿನ ಹಾಗೂ ಮಂಗಳವಾರ ಮಧ್ಯಾಹ್ನದವರೆಗೆ ಅರಮನೆಗೆ ಹಾಗೂ ಸೋಮವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ರಾಷ್ಟ್ರಪತಿಯವರು ನಗರಕ್ಕೆ ಬರುತ್ತಿರುವುದು ಇದು 2ನೇ ಬಾರಿ. ಈ ಮೊದಲು, 2022ರ ಸೆ.26ರಂದು ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಬಂದಿದ್ದರು. 2023ರ ಆ.5ರಂದು ತಮಿಳುನಾಡಿನ ಮಧುಮಲೈ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿ ಅವರಿಗೆ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಶಿಷ್ಟಾಚಾರದ ಪ್ರಕಾರ ಸ್ವಾಗತಿಸಿ, ಬೀಳ್ಕೊಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.