ADVERTISEMENT

ಮೆಟ್ರೊ ನಿಯೊ, ಮೆಟೊ ಲೈಟ್ ಸಾರಿಗೆಯ ಸಾಧ್ಯತಾ ಪರೀಕ್ಷೆಗೆ ಮುಡಾ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 9:52 IST
Last Updated 14 ಆಗಸ್ಟ್ 2021, 9:52 IST

ಮೈಸೂರು: ನಗರದ ಹೊರವಲಯದಲ್ಲಿರುವ ಸುಮಾರು 1 ಲಕ್ಷ ಮನೆಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಪೂರೈಕೆ ಯೋಜನೆಗೆ ಅಸ್ತು, ಮೆಟ್ರೊ ನಿಯೊ, ಮೆಟ್ರೊ ಲೈಟ್‌ ಸಾರಿಗೆಯ ಸಾಧ್ಯತಾ ಪರೀಕ್ಷೆ, ಗುಂಪು ಮನೆಗಳ ನೋಂದಣಿಗೆ ದರ ನಿಗದಿ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಕೈಗೊಂಡಿತು.

ಪ್ರಾಧಿಕಾರದ ಮತ್ತು ಪ್ರಾಧಿಕಾರದಿಂದ ಅನುಮೋದನೆ ಪಡೆದ ಖಾಸಗಿ ಬಡಾವಣೆಗಳಿಗೆ ಕಬಿನಿಯಿಂದ ನೀರು ಪೂರೈಕೆ ಮಾಡುವ ಯೋಜನೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ₹ 70 ಕೋಟಿ ಬಿಡುಗಡೆ ಮಾಡಲು ಸರ್ಕಾರದ ಪೂರ್ವಾನುಮತಿ ಪಡೆಯುವ ಪ್ರಸ್ತಾವಕ್ಕೆ ಸಭೆ ಅನುಮೋದನೆ ನೀಡಿತು ಎಂದು ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿದರಗೋಡು ಯೋಜನೆಯಲ್ಲಿ 180 ಎಂಎಲ್‌ಡಿ ನೀರು ಪಡೆಯುವ ಅವಕಾಶ ಇದ್ದರೂ, 60 ಎಂಎಲ್‌ಡಿ ನೀರನ್ನು ಮಾತ್ರ ಪಡೆಯಲಾಗುತ್ತಿದೆ. ಸಂಪೂರ್ಣ 180 ಎಂಎಲ್‌ಡಿ ನೀರು ಪಡೆಯಲು ಕೆಂಬಾಳು ನೀರು ಶುದ್ಧೀಕರಣ ಘಟಕದ ವಿಸ್ತರಣೆಗೆ ಹಣ ನೀಡಲಾಗುತ್ತದೆ. ಈ ಮೂಲಕ ಸುಮಾರು 1 ಲಕ್ಷ ಮನೆಗಳಿಗೆ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.

ADVERTISEMENT

‘ಗುಂಪು ಮನೆ’ ನೋಂದಣಿಗೆ ದರ ನಿಗದಿ

ಇಲ್ಲಿನ ಸಾತಗಳ್ಳಿ, ವಿಜಯನಗರ ಹಾಗೂ ಆಂದೋಲನ ವೃತ್ತದ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಗುಂ‍ಪು ಮನೆಗಳ ನೋಂದಣಿಗೆ ಚಾಲನೆ ನೀಡಲು ಸಹ ಸಭೆ ಒಪ್ಪಿಗೆ ನೀಡಿದೆ. 1 ಕೊಠಡಿ ಮನೆಗೆ ನೋಂದಣಿಗೆ ₹ 1 ಸಾವಿರ, 50 ಚದರ ಕಿ.ಮೀ ವಿಸ್ತೀರ್ಣದವರೆಗೆ ₹ 2,500, 50 ಚದರ ಕಿ.ಮೀಗೂ ಅಧಿಕ ವಿಸ್ತೀರ್ಣದ ಮನೆಗೆ ₹ 5 ಸಾವಿರ ನೋಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ. 1 ಕೊಠಡಿ ಮನೆಗೆ ₹ 14.83 ಲಕ್ಷ, 2 ಕೊಠಡಿ ಮನೆಗೆ ₹ 29.94 ಲಕ್ಷದಿಂದ ₹ 33.80 ಲಕ್ಷ ದರ ನಿಗದಿ ಮಾಡಲಾಗಿದೆ ಎಂದರು.

ಇಂಡಿಯನ್ ಹೌಸಿಂಗ್ ಫೆಡರೇಷನ್‌ ಮೂಲಕ ಮನೆ ಬೇಡಿಕೆ ಕುರಿತು ಸಮೀಕ್ಷೆಯನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ನಡೆಸಲಾಗುವುದು ಎಂದು ತಿಳಿಸಿದರು.

ಆನ್‌ಲೈನ್‌ನಲ್ಲಿಯೇ ಖಾತಾ ವರ್ಗಾವಣೆ ಮಾಡುವ ತಂತ್ರಾಂಶ ರೂಪಿಸುವುದು, ಫೆರಿಫೆರಲ್ ರಿಂಗ್‌ ರಸ್ತೆ ನಿರ್ಮಾಣದ ಕಾರ್ಯಸಾಧ್ಯತಾ ಸಮೀಕ್ಷೆ, ಈಗಾಗಲೇ ಇರುವ ಬಡಾವಣೆಗಳಲ್ಲಿ ಉದ್ಯಾನಗಳನ್ನು ಸ್ಥಳೀಯ ಸಂಘ, ಸಂಸ್ಥೆಗಳ ಸಹಕಾರ ಪಡೆದು ನಿರ್ವಹಣೆ ಮಾಡುವ ‌ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.