
ಪಿರಿಯಾಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗ ಪ್ರತಿಭಟನಾನಿರತರು ಮೈಮೇಲೆ ಸಗಣಿ ಸುರಿದುಕೊಂಡು ಸರ್ಕಾರ ಮತ್ತು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಸಿ.ಎಸ್.ಜಗದೀಶ್, ದೊಡ್ಡಯ್ಯ, ಮೂರ್ತಿ, ರಾಮಚಂದ್ರ, ಮಹಾದೇವಮ್ಮ ಮತ್ತಿತರರು ಭಾಗವಹಿಸಿದ್ದರು
ಪಿರಿಯಾಪಟ್ಟಣ: ತಾಲ್ಲೂಕಿನ ಭೂ ಸಮಸ್ಯೆ ಸೇರಿದಂತೆ ಇತರೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕಳೆದ ಮೂರು ವರ್ಷಗಳಿಂದ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರೂ ನಿರ್ಲಕ್ಷ ಧೋರಣೆ ತಾಳಿರುವ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶಗೊಂಡಿರುವ ಪ್ರತಿಭಟನಾ ನಿರತರು ಶುಕ್ರವಾರ ಮೈಮೇಲೆ ಸೆಗಣಿ ಸುರಿದುಕೊಂಡು ಸರ್ಕಾರ ಮತ್ತು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಚೇರಿಯ ಮುಂಬಭಾಗ ಕಳೆದ ಮೂರು ವರ್ಷಗಳಿಂದ ದಸಂಸ ಮುಖಂಡರಾದ ಸಿ.ಎಸ್.ಜಗದೀಶ್ ಮತ್ತು ಮುಮ್ಮಡಿ ಕಾವಲ್ ದೊಡ್ಡಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿಕೊಂಡು ಬರಲಾಗುತ್ತಿದೆ. ತಾಲ್ಲೂಕಿನ ದಲಿತರ ಮತ್ತು ರೈತರ ಭೂ ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಗಿರುವ ಭ್ರಷ್ಟಚಾರವನ್ನು ತಡೆಗಟ್ಟುವಂತೆ ಪ್ರತಿಭಟನಾಕಾರರು ನಿರಂತರವಾಗಿ ಧರಣಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇವರ ಪ್ರತಿಭಟನೆಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪಿಸಿದರು.
ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದ ವಿಧವೆ ಚೆನ್ನಮ್ಮ ಅವರಿಗೆ ಪಿಟಿಸಿಎಲ್ ಕಾಯ್ದೆಯಡಿ ಆದೇಶವಾಗಿರುವ ಭೂಮಿಯ ಸಮಸ್ಯೆಯನ್ನು ಬಗೆಹರಿಸಬೇಕು, ಚನ್ನಕಲ್ ಕಾವಲು ಗ್ರಾಮದ ಸರ್ವೇ ನಂಬರ್ 1 ಮತ್ತು 3ರ ಭೂಮಿ ಸಮಸ್ಯೆ ಬಗೆಹರಿಸಬೇಕು, ಸೂಳೆಕೋಟೆ ಗ್ರಾಮದ ಸರ್ವೆ ನಂಬರ್ 10 ರ ದಾಖಲಾತಿಗಳನ್ನು ತಿರುಚಿದವರ ಮೇಲೆ ಕಾನೂನು ಕ್ರಮವಾಗಬೇಕು, ಕೊಣಸೂರು ಗ್ರಾಮದ ಸರ್ವೇ ನಂಬರ್ 138 ಮತ್ತು 93ರ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಮಂಜೂರು ಮಾಡಿಸಿಕೊಡಬೇಕು, ಕೊಪ್ಪ ಗೆರಾಸಿಯ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಗಿರಿಜನರಿಗೆ ನಿವೇಶನಗಳನ್ನು ವ್ಯವಸ್ಥೆ ಮಾಡಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳು ಈಡೇರಬೇಕು ಎಂಬುದು ಪ್ರತಿಭಟನಾನಿರತರು ಒತ್ತಾಯಿಸಿದರು.
ಸರ್ಕಾರ ಹಾಗೂ ಉಚ್ಚ ನ್ಯಾಯಾಲಯವು ದರಖಾಸ್ತು ಮೂಲಕ ಬಂದಂತಹ ಜಮೀನನ್ನು ಪಕ್ಕಾಪೋಡು ಮಾಡಿ ಮಾಡಿಕೊಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿ ವರ್ಷಗಳೇ ಕಳೆದಿವೆ, ಆದರೆ ಈ ಆದೇಶಗಳನ್ನು ಗಾಳಿಗೆ ತೂರಿ ದಲಿತರಿಗೆ, ರೈತರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ, ಇದರಿಂದ ನಮ್ಮಗಳ ಹೆಸರಿಗೆ ದಾಖಲೆ ಮಾಡಿಸಿಕೊಳ್ಳಲು ಆಗದೆ ಹಂಚಿಕೆ ಮಾಡಿಕೊಳ್ಳಲು ಆಗದೆ ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಪ್ರತಿಭಟನಾ ನಿರತರ ಅಳಲಾಗಿದೆ.
ಪ್ರತಿಭಟನೆಯಲ್ಲಿ ಕದರೇಗೌಡ ಕೊಪ್ಪಲು ಗ್ರಾಮದ ಮೂರ್ತಿ, ಮುಮ್ಮಡಿಕಾವಲ್ ಗ್ರಾಮದ ರಾಮಚಂದ್ರ, ಕೆ.ಬಸವನಳ್ಳಿ ಗ್ರಾಮದ ನಾರಾಯಣ, ತರಿಕಲ್ ಕಾಲೋನಿಯ ರಾಜಯ್ಯ, ವಾಸು, ಕೃಷ್ಣ, ಕೃಷ್ಣ ಮೂರ್ತಿ, ಮಹಾದೇವಮ್ಮ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.