ADVERTISEMENT

ಪೊಲೀಸರನ್ನೇ ಯಾಮಾರಿಸುತ್ತಿದ್ದ ನಕಲಿ ಅಧಿಕಾರಿ!

ಹುಡುಗಿ ದನಿಯಲ್ಲಿ ಮಾತನಾಡಿ ವಿವಿಧ ಇಲಾಖಾ ಅಧಿಕಾರಿಗಳಿಗೆ ಟೋಪಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 19:18 IST
Last Updated 22 ಜನವರಿ 2019, 19:18 IST
ನಕಲಿ ಪೊಲೀಸ್ ಅಧಿಕಾರಿ ಸಿದ್ಧಪ್ಪ ಚನ್ನಬಸಪ್ಪ ನ್ಯಾಮಕ್ಕನವರ
ನಕಲಿ ಪೊಲೀಸ್ ಅಧಿಕಾರಿ ಸಿದ್ಧಪ್ಪ ಚನ್ನಬಸಪ್ಪ ನ್ಯಾಮಕ್ಕನವರ   

ಮೈಸೂರು: ಪೊಲೀಸ್ ವೇಷ ಹಾಕಿಕೊಂಡು ಠಾಣೆಯಲ್ಲೆ ಪೊಲೀಸ್ ಅಧಿಕಾರಿಗಳನ್ನು ಬೇಸ್ತು ಬೀಳಿಸುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯೊಬ್ಬನನ್ನು ಉದಯಗಿರಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಸಿದ್ಧಪ್ಪ ಚನ್ನಬಸಪ್ಪ ನ್ಯಾಮಕ್ಕನವರ (28) ಬಂಧಿತ ವ್ಯಕ್ತಿ. ಈತನ ವಿರುದ್ಧ ವಂಚನೆ ದೂರು ದಾಖಲಾಗಿದೆ. ಈತನಿಂದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೂ ಸಾಕಷ್ಟು ವಂಚನೆಗೆ ಒಳಗಾಗಿದ್ದಾರೆ ಎಂಬ ಅಂಶ ವಿಚಾರಣೆ ವೇಳೆ ಗೊತ್ತಾಗಿದೆ.

ಏನಿದು ಘಟನೆ?

ADVERTISEMENT

ಬೆಂಗಳೂರಿನ ಇಂಟಲಿಜೆನ್ಸ್ ವಿಭಾಗದಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿರುವ ಸಿದ್ದಪ್ಪ ತಾನು ಎಂದು ಹೇಳಿಕೊಂಡು ನಗರದ ವಿವಿಧೆಡೆ ಸಾರ್ವಜನಿಕರನ್ನು ಬೆದರಿಸಿ ಈತ ವಂಚಿಸುತ್ತಿದ್ದ. ಕೇವಲ ಸಾರ್ವಜನಿಕರನ್ನು ಮಾತ್ರವಲ್ಲ ವಿವಿಧ ಠಾಣೆಯ ಪೊಲೀಸರನ್ನೇ ಬೇಸ್ತು ಬೀಳಿಸುತ್ತಿದ್ದ. ಪ್ರಕರಣಗಳ ತನಿಖೆಗೆ ಇಲ್ಲಿಗೆ ಬಂದಿರುವುದಾಗಿ ಈತ ಹೇಳುತ್ತಿದ್ದ ಮಾತನ್ನು ಪೊಲೀಸರು ನಂಬುತ್ತಿದ್ದರು. ಹೆಚ್ಚಾಗಿ ಈತ ಇನ್‌ಸ್ಪೆಕ್ಟರ್‌ ಇರದ ಹೊತ್ತಿನಲ್ಲೇ ಠಾಣೆಗಳಿಗೆ ಭೇಟಿ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಲೆಗೆ ಬಿದ್ದದ್ದು ಹೇಗೆ?

ಶಕ್ತಿನಗರದ ನಿವಾಸಿ ನಾರಾಯಣಗೌಡ ಎಂಬುವವರ ಮನೆಗೆ ಕಾರಿನಲ್ಲಿ ಬಂದ ಆರೋಪಿ ‘ನಾನು ಬೆಂಗಳೂರಿನ ಪೊಲೀಸ್ ಅಧಿಕಾರಿ. ತಮ್ಮ ಪುತ್ರ ರೇಣುಕೇಶ್‌ ಅವರು ಹುಡುಗಿಯರಿಗೆ ಮೋಸ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಬಾರದು ಎಂದಿದ್ದರೆ ₹ 50 ಸಾವಿರ ಲಂಚ ಕೊಡಬೇಕು’ ಎಂದು ಕೇಳಿದ್ದಾನೆ. ಅನುಮಾನಗೊಂಡ ನಾರಾಯಣಗೌಡ ₹ 5 ಸಾವಿರ ಹಣ ನೀಡಿ, ಬಾಕಿ ಮೊತ್ತವನ್ನು ಎಟಿಎಂನಿಂದ ತರುವುದಾಗಿ ಹೇಳಿ ಉದಯಗಿರಿ ಠಾಣೆಗೆ ಬಂದಿದ್ದಾರೆ.

ದೂರು ಸ್ವೀಕರಿಸಿದ ಠಾಣೆಯ ಇನ್‌ಸ್ಪೆಕ್ಟರ್ ಪಿ.ಪಿ.ಸಂತೋಷ್ ನೇತೃತ್ವದ ತಂಡ ನಾರಾಯಣಗೌಡ ಅವರ ಮನೆಗೆ ತೆರಳಿ ಸಿದ್ಧಪ್ಪ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಾನು ಪೊಲೀಸ್ ಅಧಿಕಾರಿ ಎಂದು ಬಲವಾಗಿ ವಾದಿಸಿದ್ದಾನೆ. ‘ಯಾವ ಬ್ಯಾಚಿನ ಸಬ್‌ಇನ್‌ಸ್ಪೆಕ್ಟರ್, ನಿಮ್ಮ ಮುಖ್ಯಸ್ಥರು ಯಾರು’ ಎಂದೆಲ್ಲ ಪ್ರಶ್ನಿಸಿದ ಇನ್‌ಸ್ಪೆಕ್ಟರ್ ರಹಸ್ಯವಾಗಿ ಬೆಂಗಳೂರಿನ ಇಂಟಲಿಜೆನ್ಸ್ ವಿಭಾಗಕ್ಕೆ ಫೋನ್ ಮಾಡಿ ವಿಚಾರಿಸಿದಾಗ ಸಿದ್ದಪ್ಪ ಎಂಬ ಅಧಿಕಾರಿ ತರಬೇತಿಯಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ತೀವ್ರವಾಗಿ ವಿಚಾರಣೆ ನಡೆಸಿದಾಗ ತಾನೊಬ್ಬ ನಕಲಿ ಅಧಿಕಾರಿ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.

ಕಾರ್ಯಾಚರಣೆ ತಂಡದಲ್ಲಿ ಇನ್‌ಸ್ಪೆಕ್ಟರ್ ಸಂತೋಷ್ ಅವರೊಂದಿಗೆ ಪಿಎಸ್ಐ ಎಂ.ಜೈಕೀರ್ತಿ, ಎಎಸ್ಐ ಸಣ್ಣಪ್ಪ, ಸಿಬ್ಬಂದಿ ಸುರೇಶ್, ಸಿದ್ದಿಖಿ ಅಹಮ್ಮದ್, ಆರ್.ಎಸ್.ಕೃಷ್ಣ, ಆನಂದಕುಮಾರ, ಗೋಪಾಲ ಹಾಗೂ ಶಾಜೀಯಾ ಬಾನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.