ADVERTISEMENT

ಮೈಸೂರು: ತಿಂಗಳಲ್ಲೇ 3,525 ಆಸ್ತಿಗೆ ಇ–ಖಾತೆ!

ಅಭಿಯಾನಕ್ಕೆ ಉತ್ತಮ ಸ್ಪಂದನೆ; ಪಾಲಿಕೆ ಆದಾಯವೂ ವೃದ್ಧಿ

ಆರ್.ಜಿತೇಂದ್ರ
Published 29 ಜನವರಿ 2025, 5:20 IST
Last Updated 29 ಜನವರಿ 2025, 5:20 IST
 ಮೈಸೂರು ಮಹಾನಗರ ಪಾಲಿಕೆ ಕಚೇರಿ
 ಮೈಸೂರು ಮಹಾನಗರ ಪಾಲಿಕೆ ಕಚೇರಿ   

ಮೈಸೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿದಾರರು ಇ–ಖಾತೆ ಮಾಡಿಸಲು ಉತ್ಸಾಹ ತೋರಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲೇ ಬರೋಬ್ಬರಿ 3,525 ಆಸ್ತಿಗಳಿಗೆ ಇ–ಖಾತೆ ನೀಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಡಿಸೆಂಬರ್ ಅಂತ್ಯಕ್ಕೆ 22,179 ಆಸ್ತಿ ಮಾಲೀಕರು ಇ–ಖಾತೆ ಪಡೆದಿದ್ದರು. ಮಂಗಳವಾರದ ಅಂತ್ಯಕ್ಕೆ ಈ ಸಂಖ್ಯೆಯು 25,704ಕ್ಕೆ ಏರಿಕೆ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆ ಆಗುತ್ತಿದ್ದು, 5,500ಕ್ಕೂ ಹೆಚ್ಚು ಆಸ್ತಿಗಳಿಗೆ ಅಗತ್ಯ ದಾಖಲೆ ಒದಗಿಸುವಂತೆ ಹಿಂಬರಹ ನೀಡಲಾಗಿದೆ.

ವಾರ್ಡ್‌ವಾರು ಅಭಿಯಾನ: ‘ಪಾಲಿಕೆ ವ್ಯಾಪ್ತಿಯಲ್ಲಿ ಇ–ಖಾತೆ ಅಭಿಯಾನ ನಡೆದಿದ್ದು, ವಾರ್ಡ್‌ ಮಟ್ಟದಲ್ಲಿ ಖಾತೆಗಳನ್ನು ಮಾಡಿಕೊಡಲಾಗುತ್ತಿದೆ. ಮನೆಮನೆಗೆ ತೆರಳಿ ಕರಪತ್ರಗಳನ್ನು ಹಂಚಲಾಗುತ್ತಿದ್ದು, ಇ–ಖಾತೆಗೆ ಬೇಕಾದ ದಾಖಲೆಗಳ ವಿವರಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಜನರು ಖಾತೆ ಮಾಡಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ’ ಎನ್ನುತ್ತಾರೆ ಪಾಲಿಕೆಯ ಉಪ ಆಯುಕ್ತ (ಕಂದಾಯ) ಸೋಮಶೇಖರ್ ಜಿಗಣಿ.

ADVERTISEMENT

ತೆರಿಗೆ ಸಂಗ್ರಹವೂ ದ್ವಿಗುಣ: ಇ–ಖಾತೆ ಮಾಡಿಸಿಕೊಳ್ಳುವವರು ತಮ್ಮ ಆಸ್ತಿಯ ಎಲ್ಲ ಬಾಕಿ ಕಂದಾಯ–ಶುಲ್ಕಗಳನ್ನು ತುಂಬುವುದು ಕಡ್ಡಾಯವಾಗಿದೆ. ಅರ್ಜಿ ಸ್ವೀಕಾರ ಸಂದರ್ಭವೇ ಈ ಎಲ್ಲ ಶುಲ್ಕ ಪಾವತಿಯನ್ನೂ ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪಾಲಿಕೆ ಕರ ಸಂಗ್ರಹವೂ ದ್ವಿಗುಣಗೊಂಡಿದೆ.

ಪಾಲಿಕೆಗೆ ಸದ್ಯ ₹200 ಕೋಟಿಗೂ ಅಧಿಕ ಮೊತ್ತದ ನೀರಿನ ಕರ ಬರಬೇಕಿದೆ. ಜೊತೆಗೆ ನೂರಾರು ಕೋಟಿಯಷ್ಟು ಆಸ್ತಿ ತೆರಿಗೆಯೂ ಬಾಕಿ ಉಳಿದಿದೆ. ಇದೀಗ ಮಾಲೀಕರೇ ಬಂದು ಪಾಲಿಕೆಗೆ ಆಸ್ತಿ ಪಾವತಿಸುತ್ತಿದ್ದಾರೆ. ಇದರಿಂದಾಗಿ ತಿಂಗಳಿಗೆ ಕೋಟಿಗಳ ಲೆಕ್ಕದಲ್ಲಿ ಕಂದಾಯ ಸಂಗ್ರಹ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ಸೋಮಶೇಖರ್ ಜಿಗಣಿ

Highlights - ಸಾವಿರಾರು ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆ ಪಾಲಿಕೆ ವ್ಯಾಪ್ತಿಯಲ್ಲಿ ಇ–ಖಾತೆ ಅಭಿಯಾನ

ಇ–ಖಾತೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಸಾವಿರಾರು ಅರ್ಜಿಗಳು ಸಲ್ಲಿಕೆ ಆಗುತ್ತಿದೆ. ಅರ್ಜಿ ಜೊತೆಗೆ ಆಸ್ತಿ ತೆರಿಗೆ ನೀರಿನ ಕರ ಪಾವತಿ ರಸೀದಿ ಕಡ್ಡಾಯಗೊಳಿಸಿದ್ದು ಇದರಿಂದ ಪಾಲಿಕೆ ಆದಾಯವೂ ಹೆಚ್ಚಿದೆ
–ಸೋಮಶೇಖರ್ ಜಿಗಣಿ ಉಪ ಆಯುಕ್ತ ( ಕಂದಾಯ)

ಒಂದೇ ಬಾರಿ ₹12.25 ಲಕ್ಷ ಪಾವತಿ!

ವಲಯ ಕಚೇರಿ–5ರ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರೊಬ್ಬರು ಈಚೆಗೆ ಇ–ಖಾತೆಗಾಗಿ ಅರ್ಜಿ ಸಲ್ಲಿಸಿದ್ದು ಈ ಸಂದರ್ಭ ಬರೋಬ್ಬರಿ ₹12.25 ಲಕ್ಷ ಮೊತ್ತದ ಆಸ್ತಿ ತೆರಿಗೆಯನ್ನು ಪಾವತಿ ಮಾಡಿದ್ದಾರೆ! ‘ಈ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ತೆರಿಗೆ ಬಾಕಿ ಕುರಿತು ಮಾಹಿತಿ ಇರಲಿಲ್ಲ. ಅರ್ಜಿ ಸಲ್ಲಿಕೆ ಸಂದರ್ಭ ಅವರಿಗೆ ಈ ಬಗ್ಗೆ ತಿಳಿಹೇಳಿದ್ದು ಒಂದೇ ಬಾರಿಗೆ ಅಷ್ಟೂ ತೆರಿಗೆಯನ್ನು ಪಾವತಿಸಿದ್ದಾರೆ. ಇಂತಹ ಸಾಕಷ್ಟು ಉದಾಹರಣೆಗಳಿವೆ’ ಎನ್ನುತ್ತಾರೆ ಉಪ ಆಯುಕ್ತ ಸೋಮಶೇಖರ್ ಜಿಗಣಿ. ಪಾಲಿಕೆಯ 9 ವಲಯಗಳ ಪೈಕಿ ಮೂರನೇ ವಲಯವು ಇ–ಖಾತೆ ಅಭಿಯಾನದಲ್ಲಿ ಮುಂದೆ ಇದ್ದು ಇತರೆ ವಲಯಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.