ADVERTISEMENT

ಪಿ.ಯು. ಪ್ರವೇಶ; ಅರ್ಜಿಗಾಗಿ ಪೋಷಕರ ಸಾಲು

ವಿಜ್ಞಾನ ವಿಭಾಗಕ್ಕೆ ಹೆಚ್ಚು ಬೇಡಿಕೆ; ಕಲಾ ವಿಭಾಗದತ್ತ ಗ್ರಾಮೀಣರ ಚಿತ್ತ

ಆರ್.ಜಿತೇಂದ್ರ
Published 9 ಮೇ 2025, 8:34 IST
Last Updated 9 ಮೇ 2025, 8:34 IST
ಮಹಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರಥಮ ಪಿ.ಯು. ಅರ್ಜಿಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಸೋಮಣ್ಣ ಜೊತೆಗಿದ್ದರು –ಪ್ರಜಾವಾಣಿ ಚಿತ್ರ
ಮಹಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರಥಮ ಪಿ.ಯು. ಅರ್ಜಿಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಸೋಮಣ್ಣ ಜೊತೆಗಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಪದವಿಪೂರ್ವ ಕಾಲೇಜು ಪ್ರವೇಶ ಪ್ರಕ್ರಿಯೆ ಬಿರುಸಾಗಿ ನಡೆದಿದ್ದು, ಮಕ್ಕಳ ದಾಖಲಾತಿಗಾಗಿ ಪೋಷಕರು ಕಾಲೇಜುಗಳ ಮುಂದೆ ಸಾಲು ಗಟ್ಟಿ ನಿಲ್ಲುತ್ತಿದ್ದಾರೆ.

ಮೇ 2ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮರು ದಿನದಿಂದಲೇ ಪಿ.ಯು. ಕಾಲೇಜುಗಳು ಅಧಿಕೃತವಾಗಿ ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ಅದರಲ್ಲಿಯೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದುಕೊಳ್ಳಲು ಪೈಪೋಟಿ ನಡೆದಿದೆ. ಕೆಲವು ಕಾಲೇಜುಗಳಲ್ಲಿ ಶೇ 70–80ರಷ್ಟು ಸೀಟುಗಳು ಭರ್ತಿಯಾಗಿವೆ.

ಸರ್ಕಾರಿ ಕಾಲೇಜುಗಳೂ ಮುಂದು: ನಗರದ ಅನೇಕ ಸರ್ಕಾರಿ ಪದವಿಪೂರ್ವ ಕಾಲೇಜುಗಳೂ ಬೇಡಿಕೆ ಉಳಿಸಿಕೊಂಡಿವೆ. ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಮೆಟ್ಟಿಲಾಗಿ ಪೋಷಿಸುತ್ತಿವೆ. ಜಿಲ್ಲೆಯಲ್ಲಿ ಈ ವರ್ಷ ಸುಮಾರು 35 ಸಾವಿರ ವಿದ್ಯಾರ್ಥಿಗಳು ಪ್ರಥಮ ಪಿ.ಯು.ಗೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ.

ADVERTISEMENT

ನಗರದ ಮಹಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ. ಈ ವರ್ಷವೂ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಸೇರಿ 1,200 ವಿದ್ಯಾರ್ಥಿಗಳಿಗೆ ಪ್ರಥಮ ಪಿ.ಯು. ಪ್ರವೇಶ ಸಿಗಲಿದೆ. ಕಳೆದ ವರ್ಷ ಪ್ರಥಮ ಪಿ.ಯು. ಪ್ರವೇಶ ಕೋರಿ 3 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ವರ್ಷವೂ ಅಷ್ಟೇ ಸಂಖ್ಯೆಯ ಅರ್ಜಿಗಳು ಬರುವ ಸಾಧ್ಯತೆ ಇದೆ.

ಸರ್ಕಾರಿ ಕಾಲೇಜುಗಳಲ್ಲಿ ಈ ವಾರಾಂತ್ಯದವರೆಗೆ ಮೊದಲ ಹಂತದ ಅರ್ಜಿ ಸಲ್ಲಿಕೆಗೆ ಅವಕಾಶ ಇದ್ದು, ಮುಂದಿನ ವಾರ ಮೆರಿಟ್‌ ಆಧಾರದಲ್ಲಿ ಅರ್ಹ ವಿದ್ಯಾರ್ಥಿಗಳ ಪಟ್ಟಿ ಪ್ರಕಟಿಸಲು ಸಿದ್ಧತೆ ನಡೆದಿದೆ. ಜೂನ್ 2ರಿಂದ ತರಗತಿಗಳು ಆರಂಭ ಆಗಲಿವೆ.

ಸದ್ಯದಲ್ಲೇ ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆ ನಡೆಯಲಿದ್ದು, ಅಲ್ಲಿ ಉತ್ತೀರ್ಣ ಆಗುವವರಿಗೂ ಪಿ.ಯು.ಗೆ ಪ್ರವೇಶ ಸಿಗಲಿದೆ. ದಂಡ ಶುಲ್ಕವಿಲ್ಲದೇ ಜೂನ್‌ 14ರವರೆಗೆ ಪ್ರವೇಶಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯು ಅವಕಾಶ ನೀಡಿದೆ.

ವಿಜ್ಞಾನಕ್ಕೆ ಬೇಡಿಕೆ: ಇತರೆ ವಿಭಾಗಗಳಿಗೆ ಹೋಲಿಸಿದರೆ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಎರಡನೇ ಸ್ಥಾನದಲ್ಲಿ ವಾಣಿಜ್ಯ ಹಾಗೂ ಕಡೆಯ ಸ್ಥಾನದಲ್ಲಿ ಕಲಾ ವಿಭಾಗವಿದೆ.

‘ಪ್ರತಿ ಪೋಷಕರು ತಮ್ಮ ಮಕ್ಕಳನ್ನು ಎಂಜಿನಿಯರ್, ಡಾಕ್ಟರ್ ಆಗಿಸುವ ಕನಸು ಹೊಂದಿರುವುದರಿಂದ ಸಹಜವಾಗಿಯೇ ವಿಜ್ಞಾನ ವಿಷಯಕ್ಕೆ ಬೇಡಿಕೆ ಇದೆ. ಜೊತೆಗೆ ಮೂಲ ವಿಜ್ಞಾನ ಕಲಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ವಾಣಿಜ್ಯ ವಿಷಯಕ್ಕೂ ಬೇಡಿಕೆ ಇದ್ದೇ ಇದೆ. ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ಕಲಾ ಮಾಧ್ಯಮವನ್ನು ಹೆಚ್ಚು ಆಯ್ದುಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಮಹಾರಾಣಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ. ಸೋಮಣ್ಣ. 

ಜೂನ್‌ 2ರಿಂದ ಪಿ.ಯು ತರಗತಿಗಳು ಆರಂಭ ಆಗಲಿದ್ದು ಜೂ. 14ರವರೆಗೂ ಪ್ರವೇಶಕ್ಕೆ ಅವಕಾಶ ಇದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರಲ್ಲಿ ಉತ್ತೀರ್ಣ ಆದವರೂ ಪ್ರವೇಶ ಪಡೆಯಬಹುದು.
–ಮರಿಗೌಡ, ಡಿಡಿಪಿಯು
ಈ ವರ್ಷ ವಿಜ್ಞಾನ ವಿಭಾಗಕ್ಕೆ ಹೆಚ್ಚು ಅರ್ಜಿಗಳು ಬರುತ್ತಿವೆ. ಈ ವಾರಾಂತ್ಯದವರೆಗೂ ಅರ್ಜಿ ಸ್ವೀಕರಿಸಲಿದ್ದು ಮುಂದಿನ ವಾರ ಮೆರಿಟ್‌ ಆಧಾರದಲ್ಲಿ ಮೊದಲ ಪಟ್ಟಿ ಪ್ರಕಟ ಆಗಲಿದೆ.
–ಪಿ. ಸೋಮಣ್ಣ, ಪ್ರಾಚಾರ್ಯ ಮಹಾರಾಣಿ ಪಿ.ಯು. ಕಾಲೇಜು

ಬಾರದ ಸಿಬಿಎಸ್‌ಇ–10 ಫಲಿತಾಂಶ; ಪೋಷಕರಿಗೆ ಆತಂಕ

ರಾಜ್ಯ ಪಠ್ಯಕ್ರಮದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುನ್ನವೇ ಸಿಬಿಎಸ್‌ಸಿ-10 ಪರೀಕ್ಷೆ ನಡೆದಿದ್ದರೂ ಇನ್ನೂ ಫಲಿತಾಂಶ ಪ್ರಕಟಗೊಂಡಿಲ್ಲ. ಕಾಲೇಜುಗಳಲ್ಲಿ ಈಗಾಗಲೇ ಸೀಟುಗಳು ಭರ್ತಿ ಆಗುತ್ತಿದ್ದು ವಿದ್ಯಾರ್ಥಿ–ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ‘ಫೆಬ್ರುವರಿ 15ರಿಂದ ಮಾರ್ಚ್‌ 18ರವರೆಗೆ ಸಿಬಿಎಸ್‌ಇ–10 ಪರೀಕ್ಷೆಗಳು ನಡೆದಿದ್ದು ಮೇ ಮೊದಲ ವಾರದಲ್ಲೇ ಫಲಿತಾಂಶ ಬರುವ ನಿರೀಕ್ಷೆ ಇತ್ತು. ಆದರೆ ಈವರೆಗೆ ಫಲಿತಾಂಶದ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ. ಬಹುತೇಕ ಕಾಲೇಜುಗಳಲ್ಲಿ ಈಗಾಗಲೇ ದಾಖಲಾತಿ ನಡೆದಿದ್ದು ಫಲಿತಾಂಶ ವಿಳಂಬ ಆದಷ್ಟು ನಮ್ಮ ಮಕ್ಕಳಿಗೆ ಸೀಟು ಕೈ ತಪ್ಪುವ ಆತಂಕ ಇದೆ. ಆಗ ಸೀಟು ಸಿಕ್ಕಿದ ಕಾಲೇಜಿಗೆ ಸೇರಿಸಬೇಕಾದ ಅನಿವಾರ್ಯ ಉಂಟಾಗಬಹುದು’ ಎನ್ನುತ್ತಾರೆ ರಾಘವೇಂದ್ರ ನಗರ ನಿವಾಸಿ ಹರೀಶ್.

ಎರಡು ಹೊಸ ಕಾಲೇಜು ಆರಂಭ!

ಈ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿ ಎರಡು ಹೊಸ ಪದವಿಪೂರ್ವ ಕಾಲೇಜುಗಳು ಆರಂಭಗೊಳ್ಳಲಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶಗಳು ಹೆಚ್ಚಲಿವೆ. ಮೈಸೂರು ತಾಲ್ಲೂಕಿನ ರಂಗಸಮುದ್ರದ ಸರ್ಕಾರಿ ಪ್ರೌಢಶಾಲೆಯನ್ನು ಉನ್ನತೀಕರಿಸಲಾಗುತ್ತಿದ್ದು ಈ ವರ್ಷದಿಂದ ಅಲ್ಲಿ ಪದವಿಪೂರ್ವ ವಿಭಾಗ ತೆರೆಯಲಿದೆ. ನಂಜನಗೂಡು ತಾಲ್ಲೂಕಿನ ಕಸುವಿನಹಳ್ಳಿಯಲ್ಲಿ ಸಹ ಪಿ.ಯು. ಕಾಲೇಜು ಕಾರ್ಯಾರಂಭ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.