ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧೆ– ಮಹೇಶ್

ಬಹುಜನಸಮಾಜ ಪಕ್ಷದಿಂದ ಕೃತಜ್ಞತಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಮೇ 2019, 1:21 IST
Last Updated 4 ಮೇ 2019, 1:21 IST

ಮೈಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ವು ಸ್ಪರ್ಧಿಸಲಿದೆ ಎಂದು ಶಾಸಕ ಮಹೇಶ್ ತಿಳಿಸಿದರು.

ನಗರದ ರೋಟರಿ ಸಭಾಂಗಣದಲ್ಲಿ ಬಿಎಸ್‌ಪಿ ವತಿಯಿಂದ ಶುಕ್ರವಾರ ನಡೆದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆ ಎಂದರೆ ಭಯವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಷ್ಟೇ ಲೋಕಸಭಾ ಚುನಾವಣೆ ಎದುರಿಸಿದ್ದೇವೆ. ಇದರ ಬೆನ್ನಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಬಂದಿದೆ. ಇದರಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವ ಇರಾದೆ ಇದೆ ಎಂದರು.

ADVERTISEMENT

ಈಗಾಗಲೇ ಚಾಮರಾಜನಗರ, ಮೈಸೂರು ಭಾಗಗಳಲ್ಲಿ ಬಿಎಸ್‌ಪಿ ಸಾಕಷ್ಟು ಪ್ರಭಾವಶಾಲಿಯಾಗಿದೆ. ಕೇವಲ ಇಲ್ಲಿ ಮಾತ್ರವಲ್ಲ ಎಲ್ಲ 165 ನಗರ, ಪುರಸಭೆ, ಪಟ್ಟಣ ಪಂಚಾಯಿತಿಗಳ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಬಾರಿ ಹೆಚ್ಚಿನ ಪ್ರಾಬಲ್ಯ ಗಳಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.

ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ‘ಕೊಡಗಿನಲ್ಲಿ ಪಕ್ಷ ಕಟ್ಟಲು ಒಳ್ಳೆಯ ಅವಕಾಶಗಳಿವೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೂಕ್ತ ಯೋಜನೆ ರೂಪಿಸಿಕೊಂಡರೆ ಪಕ್ಷ ಬಲವಾಗಿ ಬೇರೂರಲಿದೆ’ ಎಂದರು.

ಕೆ.ಆರ್.ಕ್ಷೇತ್ರದ ಅಧ್ಯಕ್ಷ ಶ್ರೀನಿವಾಸಪ್ರಸಾದ್ ಮಾತನಾಡಿ, ‘ಕಾರ್ಯಕರ್ತರ ಕೊರತೆಯ ನಡುವೆಯೂ ಕೆ.ಆರ್.ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಮತಗಳು ಪಕ್ಷದ ಅಭ್ಯರ್ಥಿಗೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಕುಮಾರ್ ಮಾತನಾಡಿ, ‘ಕನಿಷ್ಠ ಎಂದರೂ ಕ್ಷೇತ್ರದಲ್ಲಿ 10ರಿಂದ 15 ಸಾವಿರ ಮತಗಳು ಪಕ್ಷಕ್ಕೆ ಬರಲಿವೆ. ಮುಂಬರುವ ದಿನಗಳಲ್ಲಿ ಇದರ ಪ್ರಮಾಣದಲ್ಲಿ ಏರಿಕೆಯಾಗಲಿದೆ’ ಎಂದು ತಿಳಿಸಿದರು.

ಮೈಸೂರು-ಕೊಡುಗು ಲೋಕಸಭೆ ಕ್ಷೆತ್ರದ ಬಿಎಸ್‌ಪಿ ಅಭ್ಯರ್ಥಿ ಡಾ.ಬಿ.ಚಂದ್ರೇಗೌಡ, ನಗರ ಘಟಕ ಅಧ್ಯಕ್ಷ ಬಸವರಾಜು, ಪಾಲಿಕೆ ಸದಸ್ಯರಾದ ಬೇಗಂ ಪಲ್ಲವಿ, ಮುಖಂಡರಾದ ಅರಕಲವಾಡಿ ನಾಗೇಂದ್ರ, ಸಿದ್ಧರಾಜು, ರಾಹುಲ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.