ತಿ.ನರಸೀಪುರ: ಬುಧವಾರ ನಡೆಯಲಿರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮಂಗಳವಾರ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ 227 ಮತಗಟ್ಟೆಗಳಿವೆ. ಒಟ್ಟು 1048 ಸಿಬ್ಬಂದಿ ನಿಯೋಜಿಸಲಾಗಿದೆ. ಶೇ 5ರಷ್ಟು ಸಿಬ್ಬಂದಿ ಮೀಸಲಿರಿಸಲಾಗಿದೆ.
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಚುನಾವಣಾ ಕಾರ್ಯ ನಿಯೋಜಿತಗೊಂಡ ಸಿಬ್ಬಂದಿಯನ್ನು ಅಗತ್ಯ ಸೂಚನೆಗಳೊಂದಿಗೆ ಮತಗಟ್ಟೆಗಳಿಗೆ ಇವಿಎಂ ಯಂತ್ರ ಸೇರಿದಂತೆ ಚುನಾವಣಾ ಪರಿಕರಗಳೊಂದಿಗೆ ಕಳುಹಿಸಲಾಯಿತು. ಸಿಬ್ಬಂದಿ ತಲುಪಿರುವ ಬಗ್ಗೆ ಹಾಗೂ ವ್ಯವಸ್ಥೆ ಬಗ್ಗೆ ಸೆಕ್ಟರ್ ಅಧಿಕಾರಿಗಳು ಮಾಹಿತಿ ನೀಡುವರು.
‘ಬುಧವಾರ ಬೆಳಿಗ್ಗೆ 5.15ರಿಂದ 5.45ರೊಳಗೆ ಅಣಕು ಮತದಾನ ನಡೆಯಲಿದೆ. ಈ ವೇಳೆಗೆ ಪಕ್ಷಗಳ, ಅಭ್ಯರ್ಥಿಗಳ ಏಜೆಂಟರು ಭಾಗವಹಿಸುವ ನಿರೀಕ್ಷೆ ಇದೆ. ಇಲ್ಲವಾದಲ್ಲಿ ನಿಗದಿತ ಸಮಯಕ್ಕೆ ಅಣಕು ಮತದಾನ ನಡೆದು ಬೆಳಿಗ್ಗೆ 7 ಗಂಟೆಗೆ ಅಧಿಕೃತವಾಗಿ ಮತದಾನ ಆರಂಭವಾಗಲಿದೆ. ಮತದಾನ ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಇರುತ್ತದೆ. ಒಂದು ವೇಳೆ 6 ಗಂಟೆಯ ನಂತರ ಕ್ಯೂ ಇದ್ದರೆ ಬಿಎಲ್‌ಒ ಅವರು ಕ್ಯೂ ಆಪ್ ಬಳಸಿ ಎಷ್ಟು ಜನ ಕ್ಯೂನಲ್ಲಿ ಇದ್ದಾರೆ ಎಂಬ ಮಾಹಿತಿ ನೀಡುತ್ತಾರೆ’ ಎಂದು ಚುನಾವಣಾಧಿಕಾರಿ ಸೋಮಶೇಖರ್ ತಿಳಿಸಿದರು.
‘ಒಟ್ಟು ಮತಗಟ್ಟೆಗಳಲ್ಲಿ ವಲ್ನರಬಲ್ 7 ಹಾಗೂ 34 ಕ್ರಿಟಿಕಲ್ ಮತಗಟ್ಟೆಗಳಿವೆ. ವಿಶೇಷವಾಗಿ ಕ್ಷೇತ್ರದಲ್ಲಿ ಬನ್ನೂರು, ತಲಕಾಡು, ಮೂಗೂರು, ಹನುಮನಾಳು, ಹೊಸ ಹೆಮ್ಮಿಗೆ ಗ್ರಾಮಗಳಲ್ಲಿ ತಲಾ ಒಂದರಂತೆ 5 ಸಖಿ ಮತಗಟ್ಟೆಗಳಿವೆ. ತಿ.ನರಸೀಪುರದಲ್ಲಿ ಅಂಗವಿಕಲರಿಗೆ, ಕಲಿಯೂರಿನಲ್ಲಿ ಯುವಕರಿಗೆ ಒಂದು ಹಾಗೂ ಧ್ಯೇಯ ಯುಕ್ತ (ಥೀಮ್ ಬೇಸ್ಡ್) ಒಂದು ಮತಗಟ್ಟೆಗಳಿವೆ’ ಎಂದು ಮಾಹಿತಿ ನೀಡಿದರು.
‘ಎಲ್ಲಾ ಮತಗಟ್ಟೆಗಳು ಸೇರಿದಂತೆ 139 ಸಿಸಿ ಕ್ಯಾಮೆರಾಗಳನ್ನು ವೆಬ್ ಕಾಸ್ಟಿಂಗ್‌ಗಾಗಿ ಅಳವಡಿಸಲಾಗಿದೆ. ಕೇಂದ್ರ ಸರ್ಕಾರದಿಂದ ನಿಯೋಜಿತಗೊಂಡ ಸೂಕ್ಷ್ಮ ಪರಿಶೀಲನಾ ಅಧಿಕಾರಿಗಳು ಕೂಡ ಇರುತ್ತಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.