ADVERTISEMENT

ನೌಕರಿ ಕಾಯಂ, ಸಂಬಳ ನೀಡಲು ಒತ್ತಾಯ

ಹುಣಸೂರಿನಲ್ಲಿ ನಗರಸಭೆ ಗುತ್ತಿಗೆ ಪೌರಕಾರ್ಮಿಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 4:41 IST
Last Updated 30 ಸೆಪ್ಟೆಂಬರ್ 2020, 4:41 IST
ಹುಣಸೂರು ನಗರಸಭೆ ಕಚೇರಿ ಎದುರು ಮಂಗಳವಾರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರು ನೇರ ನೇಮಕಾತಿ ಹಾಗೂ ಸಂಬಳಕ್ಕೆ ಒತ್ತಾಯಿಸಿ ಪ್ರತಿಭಟಿಸಿದರು
ಹುಣಸೂರು ನಗರಸಭೆ ಕಚೇರಿ ಎದುರು ಮಂಗಳವಾರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರು ನೇರ ನೇಮಕಾತಿ ಹಾಗೂ ಸಂಬಳಕ್ಕೆ ಒತ್ತಾಯಿಸಿ ಪ್ರತಿಭಟಿಸಿದರು   

ಹುಣಸೂರು: ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 100ಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿ ನೇರ ವೇತನ ನೀಡಬೇಕು ಹಾಗೂ ಕಾಯಂಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ನಗರಸಭೆ ಎದುರು ಪ್ರತಿಭಟಿಸಿದರು.

‘ನಗರಸಭೆಯಲ್ಲಿ ಹಲವು ವರ್ಷದಿಂದ ಹೊರಗುತ್ತಿಗೆ ಸಿಬ್ಬಂದಿಯಾಗಿ ವಾಟರ್‌ಮೆನ್, ತ್ಯಾಜ್ಯ ಸಂಗ್ರಹ ವಾಹನ ಚಾಲಕ ಮತ್ತು ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದು ತಮಗೆ ಗುತ್ತಿಗೆದಾರ ಸಕಾಲದಲ್ಲಿ ಸಂಬಳ ನೀಡುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ’ ಎಂದು ವಾಟರ್‌ಮೆನ್ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದರು.

ನಗರಸಭೆ ವಾಹನ ಚಾಲಕರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ, ‘ಗುತ್ತಿಗೆದಾರ ಸಂಬಳ ಸರ್ಕಾರಿ ನಿಯಮಾನುಸಾರ ನೀಡದೆ ಅವರಿಗೆ ಬೇಕಾದ ರೀತಿಯಲ್ಲಿ ನೀಡುತ್ತಿದ್ದಾರೆ. ಗುತ್ತಿಗೆ ಸಿಬ್ಬಂದಿಗೆ ಯಾವುದೇ ಅಗತ್ಯ ಸೌಲಭ್ಯವಿಲ್ಲದೆ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲೂ ಸಾರ್ವಜನಿಕರ ಸೇವೆ ಸಲ್ಲಿಸುತ್ತಿದ್ದೇವೆ. ಆರೋಗ್ಯ ವಿಮೆ ಇಲ್ಲ, ಜೀವ ಭದ್ರತೆ ಇಲ್ಲದೆ ಸೇವೆ ಸಲ್ಲಿಸುವುದು ಕಷ್ಟ ಸಾಧ್ಯವಾಗಿದೆ’ ಎಂದರು.

ADVERTISEMENT

ಗುತ್ತಿಗೆ ಸಿಬ್ಬಂದಿಗೆ ನೇರ ನೇಮಕಾತಿ ಮಾಡಿಕೊಂಡು ಕಾಯಂ ಸಿಬ್ಬಂದಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಚಿನ್ನಸ್ವಾಮಿ, ರೇವಣ್ಣ, ಶಿವಸ್ವಾಮಿ, ರವಿಕುಮಾರ್, ಬನ್ನಾರಿಸ್ವಾಮಿ, ಮಂಜು ಪೌರ ಕಾರ್ಮಿಕ ಸಮುದಾಯದ ಮುಖಂಡ ಪೆರುಮಾಳ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.