ADVERTISEMENT

ಭಾರತೀಯ ಭಾಷೆಗಳೆಲ್ಲವೂ ಸಂಸ್ಕೃತಿಯ ಪ್ರತೀಕ: ಪ್ರೊ.ಬಿ.ವಿ.ಸಾಂಬಶಿವಯ್ಯ

‘ಮಾತೃ ಭಾಷಾ ದಿನಾಚರಣೆ’ಯಲ್ಲಿ ಪ್ರೊ.ಬಿ.ವಿ.ಸಾಂಬಶಿವಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 16:28 IST
Last Updated 21 ಫೆಬ್ರುವರಿ 2022, 16:28 IST
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ‘ಮಾತೃ ಭಾಷಾ ದಿನಾಚರಣೆ’ ನಡೆಯಿತು. ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಚ್‌.ಸಿ.ಹೊನ್ನಪ್ಪ ಇದ್ದಾರೆ
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ‘ಮಾತೃ ಭಾಷಾ ದಿನಾಚರಣೆ’ ನಡೆಯಿತು. ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಚ್‌.ಸಿ.ಹೊನ್ನಪ್ಪ ಇದ್ದಾರೆ   

ಮೈಸೂರು: ‘ಪ್ರಪಂಚದಲ್ಲಿ ಏಳು ಸಾವಿರ ಭಾಷೆಗಳಿವೆ. ಭಾರತೀಯ ಭಾಷೆಗಳೆಲ್ಲವೂ ದೇಶದ ಸಂಸ್ಕೃತಿಯ ಪ್ರತೀಕವಾಗಿವೆ’ ಎಂದು ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ತಿಳಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ‘ಮಾತೃ ಭಾಷಾ ದಿನಾಚರಣೆ’ಯಲ್ಲಿ ಮಾತನಾಡಿದ ಅವರು ‘ಭಾಷೆಗಳನ್ನಾಡುವವರು ಭ್ರಾತೃತ್ವದಿಂದ ನಡೆದುಕೊಳ್ಳಬೇಕು. ಪ್ರಾದೇಶಿಕ ಐತಿಹ್ಯ, ಮಹಾತ್ಮರ ಚರಿತ್ರೆ, ಪರಂಪರೆ, ಭಾಷಾ ವಿಶೇಷತೆ ಆಯಾ ಪ್ರದೇಶದ ವೈಶಿಷ್ಟ್ಯವಾಗಿವೆ. ಇವುಗಳು ಆಯಾ ಪ್ರದೇಶದ ಮಾತೃಭಾಷೆಯ ಮೂಲಕವೇ ಲಭ್ಯವಾಗುತ್ತವೆ. ಎಲ್ಲಾ ಭಾಷೆಗಳಿಗೂ ಆದ್ಯತೆ ನೀಡಿ, ಬಳಸಿ–ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

‘ಭಾಷೆ ಎಂಬುದು ಆಲೋಚನೆ-ಅಭಿಪ್ರಾಯಗಳ ಅಭಿವ್ಯಕ್ತಿಯ ಮಾಧ್ಯಮ. ಮಾತೃವಿನ ಮೂಲಕ ಮಗು ಭಾಷೆ ಕಲಿಯುತ್ತದೆ. ಇಂದಿನ ಸಂದರ್ಭದಲ್ಲಿ ಮಾತೃಭಾಷೆ ಮತ್ತು ವ್ಯವಹಾರಿಕ ಭಾಷೆಯನ್ನು ಒಂದಾಗಿ ಕೊಂಡೊಯ್ಯುವುದು ಒಂದು ಕಲೆ. ಮಾತೃಭಾಷೆಯನ್ನು ಉಳಿಸಬೇಕೆಂದರೆ ಅವಕಾಶ ಸಿಕ್ಕಾಗಲೆಲ್ಲಾ ಮಾತೃಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಇದರಿಂದ ಸಂಸ್ಕೃತಿಯೂ ಕೂಡ ಬೆಳೆಯುತ್ತದೆ’ ಎಂದು ಹೇಳಿದರು.

ADVERTISEMENT

ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ಸಿ.ಹೊನ್ನಪ್ಪ ಮಾತನಾಡಿದರು. ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ತಾವು ಬಿಡಿಸಿದ 15 ಚಿತ್ರಗಳನ್ನು ಪ್ರದರ್ಶಿಸಿದರು. ಡಾ.ಬಿ.ಎಸ್.‌ಸುದೀಪ್‌ ಸ್ವಾಗತಿಸಿದರು. ಸಂಧ್ಯಾ ಪ್ರಾರ್ಥಿಸಿದರು. ಅನನ್ಯ ಆರ್.ವಿ. ನಿರೂಪಿಸಿದರು. ಭವ್ಯಶ್ರೀ ವಂದಿಸಿದರು. ಸಂಚಾಲಕರಾದ ಡಾ.ಮಹೇಶ್ವರಿ,ಎನ್‌. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.