ADVERTISEMENT

ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಿ: ಶ್ರೀನಿವಾಸ ಪ್ರಸಾದ್‌ಗೆ ಕಿವಿಮಾತು

ಸಂಸದ ವಿ.ಶ್ರೀನಿವಾಸಪ್ರಸಾದ್‌ಗೆ ಮಾಜಿ ಮೇಯರ್ ಪುರುಷೋತ್ತಮ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 12:51 IST
Last Updated 18 ನವೆಂಬರ್ 2019, 12:51 IST

ಮೈಸೂರು: ‘ನೀವೊಂದು ಶಕ್ತಿಯಾಗಿದ್ದವರು. ಇದೀಗ ನೀವೇ ಸಂವಿಧಾನದ ಆಶಯದಿಂದ ದೂರವಾದರೆ, ನೂರಾರು ಧ್ವನಿಗಳು ಅಡಗುತ್ತವೆ. ನಿಮ್ಮ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಿ’ ಎಂದು ಮಾಜಿ ಮೇಯರ್ ಪುರುಷೋತ್ತಮ್ ಸಂಸದ ವಿ.ಶ್ರೀನಿವಾಸಪ್ರಸಾದ್‌ಗೆ ಕಿವಿಮಾತು ಹೇಳಿದರು.

‘ಸಚಿವ ಸುರೇಶ್‌ಕುಮಾರ್ ತಪ್ಪು ಎಸಗಿಲ್ಲ. ಅವರ ವಿರುದ್ಧ ಪ್ರತಿಭಟಿಸಬೇಡಿ ಎಂದು ಹೇಳಿಕೆ ನೀಡಿದರೆ ಅದನ್ನು ಯಾವ ರೀತಿ ಸಹಿಸಿಕೊಳ್ಳೋದು’ ಎಂದು ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ನಿಮ್ಮ ಮುಂದೆ ನಿಂತು ಮಾತನಾಡಲು ಸಾಧ್ಯವಿಲ್ಲದಂತಹ ಗಂಭೀರ ವ್ಯಕ್ತಿತ್ವ ನಿಮ್ಮದಾಗಿತ್ತು. ಸಮ ಸಮಾಜ ಕಟ್ಟಲು ಯತ್ನಿಸಿದವರು ನೀವು. ಆದರೆ ಈಚೆಗೆ ನಿಮ್ಮ ಹೇಳಿಕೆಗಳು ಗಂಭೀರವಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆ ವ್ಯಕ್ತವಾಗುತ್ತಿವೆ. ನೀವು ಪಾಲಿಸಿಕೊಂಡು ಬಂದ ಸಿದ್ಧಾಂತ, ಹೋರಾಟ ಎಲ್ಲಿ ಹೋದವು’ ಎಂದು ಪುರುಷೋತ್ತಮ್ ಪರೋಕ್ಷವಾಗಿ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಇದೀಗ ನಿಮಗೆ ಮತ ಹಾಕಿದವರು ಪ್ರಶ್ನೆ ಮಾಡುವಂತಿಲ್ಲವಾ? ನಿಮ್ಮ ತಪ್ಪುಗಳನ್ನು ಸಹಿಸಿಕೊಳ್ಳಬೇಕಾ? ನೀವು ಪ್ರಜಾಪ್ರಭುತ್ವದಲ್ಲಿದ್ದೀರೋ? ರಾಜಪ್ರಭುತ್ವದಲ್ಲಿದ್ದೀರೋ? ಎಂಬುದೇ ಅರಿಯದಾಗಿದೆ’ ಎಂದು ಟೀಕಿಸಿದರು.

ಮಹೇಶ್‌ ವಿರುದ್ಧ ಆಕ್ರೋಶ: ‘25 ವರ್ಷ ಗೋಡೆಗಳ ಮೇಲೆ ಬರೆದಿದ್ದು ಏನನ್ನು? ಎಂಬುದನ್ನು ಶಾಸಕ ಎನ್.ಮಹೇಶ್‌ ಮೊದಲು ಅರಿತುಕೊಳ್ಳಬೇಕು’ ಎಂದೂ ಪುರುಷೋತ್ತಮ್ ಹೇಳಿದರು.

‘ಶಾಸಕ ಮಹೇಶ್‌, ಗಾಂಧಿ-ಅಂಬೇಡ್ಕರ್ ಸಿದ್ಧಾಂತಗಳ ಕಸಿಯಾಗಬೇಕು ಎಂದು ಈಚೆಗೆ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ನಿಲುವಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್, ಬುದ್ಧ, ಕಾನ್ಶಿರಾಮ್, ಮಾಯಾವತಿಯವರ ತತ್ವ ಸಿದ್ಧಾಂತ ಎಲ್ಲಿ ಹೋದವು. ಬಿಎಸ್‌ಪಿ ಸಂಘಟನೆಯ ಆರಂಭದ ದಿನದಿಂದಲೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಬೈದುಕೊಂಡು, ವಿರೋಧಿಸಿಕೊಂಡೇ ಹೋರಾಟ ಮಾಡಿದವರು. ಇದೀಗ ಓಲೈಕೆಗೆ ಮುಂದಾಗಿರುವುದು ಸರಿಯಲ್ಲ’ ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.