ADVERTISEMENT

ವಚನದ ಆಶಯ ಪಾಲಿಸದಿದ್ದರೆ ಜೀವನ ಅಪೂರ್ಣ: ಮೊರಬದ ಮಲ್ಲಿಕಾರ್ಜುನ

ಡಾ.ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:24 IST
Last Updated 2 ಜುಲೈ 2025, 14:24 IST
ಮೈಸೂರಿನ ಕಿರುರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಶಾಸಕ ಸಿ.ಎನ್. ಮಂಜೇಗೌಡ ಅವರು ಡಾ. ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಕಿರುರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಶಾಸಕ ಸಿ.ಎನ್. ಮಂಜೇಗೌಡ ಅವರು ಡಾ. ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ವಚನದ ಆಶಯ ಪಾಲಿಸದಿದ್ದರೆ ಜೀವನ ಅಪೂರ್ಣ, ಡಾ.ಫ.ಗು.ಹಳಕಟ್ಟಿ ಅವರು ವಚನವನ್ನು ಜನಮಾನಸಕ್ಕೆ ತಲುಪಿಸಿದರು’ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣೆ ವಿಭಾಗದ ಪ್ರೊ.ಮೊರಬದ ಮಲ್ಲಿಕಾರ್ಜುನ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಿರು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದರು.

‘ಮುಂಬೈನ ವಿಧಾನ ಪರಿಷತ್ ಸದಸ್ಯರಾಗಿದ್ದ ಹಳಕಟ್ಟಿ ಅವರು ಜನರಿಗೆ ಕುಡಿಯುವ ನೀರಿಗಾಗಿ ಕೆರೆಕಟ್ಟೆ, ರೈತರ ಆರ್ಥಿಕಾಭಿವೃದ್ಧಿಗೆ ಬ್ಯಾಂಕ್ ಸ್ಥಾಪನೆ, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಮಾದರಿ ಕೆಲಸ ಮಾಡಿದ್ದರು. ನಂತರ ಅವರು ವಚನ ಸಾಹಿತ್ಯ ಕಾಪಾಡುವ ಕೆಲಸಕ್ಕೆ ಮುಂದಾದರು. ವಚನಗಳ ಅಧ್ಯಯನ, ಸಂಗ್ರಹ ಹಾಗೂ ಸಂಶೋಧನೆಗೆ ಒತ್ತು ನೀಡಿದರು. ಮನೆಮನೆಗೆ ತೆರಳಿ ವಚನಗಳ ತಾಳೆಗರಿ, ಹಸ್ತ ಪ್ರತಿಗಳನ್ನು ಸಂಗ್ರಹಿಸಲು ಮನೆ ಮನೆಗಳಿಗೆ ತೆರಳಿದರು’ ಎಂದರು.

ADVERTISEMENT

‘1925ರಲ್ಲಿ ಮನೆ ಮಾರಾಟ ಮಾಡಿ ಅದರಲ್ಲಿ ಬಂದ ಹಣದಿಂದ ಹಿತಚಿಂತಕರ ಹೆಸರಿನಲ್ಲಿ ಮುದ್ರಣಾಲಯ ಸ್ಥಾಪಿಸಿ ವಚನಗಳನ್ನು ಮುದ್ರಿಸಿ ಪ್ರಕಟಿಸಿದರು. ವಚನದ ಕುರಿತ ಅವರ ಶ್ರದ್ಧೆಯಿಂದ ಅವು ಜನರನ್ನು ತಲುಪಲು ಸಾಧ್ಯವಾಯಿತು’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ‘ಶತಮಾನಗಳ ಹಿಂದೆ ಹಳಕಟ್ಟಿಯಂತಹ ಮಹಾತ್ಮರು ಜನಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದರು. ನಂತರ ಕುವೆಂಪು ಅಂತಹವರನ್ನು ಹೊರತುಪಡಿಸಿದಲ್ಲಿ ಗಮನ ಸೆಳೆಯುವ ಸಾಧಕರನ್ನು ನಾವು ಕಾಣಲಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಆನಂದ ಕುಮಾರ್‌ ಕಂಬಳಿಹಾಳ ಮತ್ತು ತಂಡವು ಹಿಂದೂಸ್ಥಾನಿ ಶೈಲಿಯಲ್ಲಿ ನಡೆಸಿದ ವಚನ ಗಾಯನವು ಎಲ್ಲರ ಗಮನ ಸೆಳೆಯಿತು.

ಎಡಿಸಿ ಪಿ. ಶಿವರಾಜ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಭಾಗವಹಿಸಿದ್ದರು.

ಪ್ರತಿನಿಧಿಗಳನ್ನು ಅವಮಾನಿಸದಿರಿ....

ಕಿರುರಂಗಮಂದಿರದ ಆವರಣದಲ್ಲಿ ನಡೆದ ಹಳಕಟ್ಟಿ ಅವರ ಜಯಂತಿ ಆಚರಣೆಯ ಉದ್ಘಾಟಕರಾಗಿ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಆಗಮಿಸಿದ್ದರು.

ಅವರು ಉದ್ಘಾಟನಾ ನುಡಿಗಳನ್ನಾಡುವ ವೇಳೆ ವಿದ್ಯಾರ್ಥಿ ಸಮೂಹವನ್ನು ಕಂಡು ತಮ್ಮ ಬಾಲ್ಯದ ಶಾಲಾ ದಿನಗಳ ಅನುಭವವನ್ನು ಹಂಚಿಕೊಳುತ್ತಿದ್ದರು. ಈ ವೇಳೆ ಕಾರ್ಯಕ್ರಮದ ಅಭಿಕರ ಸಾಲಿನಲ್ಲಿ ಕುಳಿತಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಇನ್ನಿಬ್ಬರು ನೀವು ಹಳಕಟ್ಟಿ ಅವರ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿ. ಸಮಯವನ್ನು ಹಾಳುಮಾಡಬೇಡಿ ಎಂದು ಜೋರು ಧನಿಯಲ್ಲಿ ಹೇಳಿದರು. ಅವರ ಮಾತಿನಿಂದ ಮುಜುಗರಕ್ಕೆ ಒಳಗಾದ ಮಂಜೇಗೌಡರು ಅರ್ದಕ್ಕೆ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು.

ಹಳಕಟ್ಟಿ ಅವರ ಬಗ್ಗೆ ಮಾತನಾಡಲು ಉಪನ್ಯಾಸಕರನ್ನು ಆಹ್ವಾನಿಸಿರುವಾಗ ಶಾಸಕರು ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಬೇರೆ ವಿಚಾರವನ್ನು ಪ್ರಸ್ತಾಪಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಹಿರಿಯ ಸಾಹಿತಿಗಳು ಎನಿಸಿಕೊಂಡವರು ಓರ್ವ ಶಾಸಕರನ್ನು ಅಗೌರವಕ್ಕೀಡು ಮಾಡಬಾರದು ಎಂದು ಸಭಿಕರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.