ಮೈಸೂರು: ನಿರಪರಾಧಿ ಸುರೇಶ್ ವಿರುದ್ಧ ಸುಳ್ಳು ಪ್ರಕರಣ ಸೃಷ್ಟಿಸಿದ ಆರೋಪದಲ್ಲಿ ಪ್ರಕರಣದ ತನಿಖಾಧಿಕಾರಿ ಬಿ.ಜಿ.ಪ್ರಕಾಶ್ ವಿರುದ್ಧ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಯು 8ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ನ್ಯಾಯಾಲಯವು ನವೆಂಬರ್ 19 ರಂದು ವಿಚಾರಣೆಗೆ ಹಾಜಾರಾಗುವಂತೆ ಬಿ.ಜಿ.ಪ್ರಕಾಶ್ ಗೆ ನೋಟೀಸ್ ನೀಡಿದೆ.
ಪ್ರಕರಣದ ಹಿನ್ನೆಲೆ: ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ನಿವಾಸಿ ಗಾಂಧಿ ಅವರ ಮಗ ಸುರೇಶ ತನ್ನ ಪತ್ನಿ ಮಲ್ಲಿಗೆ ಕಾಣೆಯಾಗಿದ್ದಾರೆ ಎಂದು ಕುಶಾಲನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಕೆಲ ಸಮಯದ ಬಳಿಕ ಮೈಸೂರು ಜಿಲ್ಲೆಯ ಬೆಟ್ಟದಪುರದಲ್ಲಿ ಸಿಕ್ಕ ಶವವನ್ನು ಮಲ್ಲಿಗೆಯ ಶವವೆಂದು ಗುರುತಿಸಿ ಸುರೇಶ್ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದರು. ಕೊಲೆಯಾಗಿದ್ದಾಳೆ ಎಂದು ಬಿಂಬಿಸಲಾಗಿದ್ದ ಮಲ್ಲಿಗೆ ಎಪ್ರಿಲ್ 1 ರಂದು ಮಡಿಕೇರಿಯಲ್ಲಿ ಪತ್ತೆಯಾದಾಗ ಪ್ರಕರಣಕ್ಕೆ ವಿಶೇಷ ತಿರುವು ಸಿಕ್ಕಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲವು ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ತನಿಖಾಧಿಕಾರಿಯಾಗಿದ್ದ ಬಿ.ಜಿ.ಪ್ರಕಾಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಾಲಯದ ಆಡಳಿತಾಧಿಕಾರಿಗೆ ಸೂಚಿಸಿತ್ತು.
ನ್ಯಾಯಾಲಯದ ಸೂಚನೆ ಬಳಿಕವೂ ಆರೋಪಿ ವಿರುದ್ಧ ಪ್ರಕರಣ ದಾಖಲಾಗದಿರುವುದರ ಬಗ್ಗೆ 'ಪ್ರಜಾವಾಣಿ' ವಿಶೇಷ ವರದಿ ಪ್ರಕಟಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರ ವಾರ್ಷಿಕ ಸಭೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ ಬಿ.ಜಿ.ಪ್ರಕಾಶ್, ಪ್ರಕಾಶ್ ಎತ್ತಿಮನಿ, ಮಹೇಶ್ ಕುಮಾರ್ ಅವರ ವಿರುದ್ಧ ಕ್ರಮವಹಿಸುವಂತೆ ಸೂಚಿಸಿದ್ದರು. ಬಳಿಕ ಅವರನ್ನು ಅಮಾನತುಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.