ADVERTISEMENT

ರಸ್ತೆಗೆ ಬೀಳುವ ಕಲ್ಲು: ವಾಹನ ಸವಾರರಿಗೆ ಸಂಕಟ

ಟ್ರಾಕ್ಟರ್‌– ಲಾರಿಗಳಲ್ಲಿ ಸಾಮರ್ಥ್ಯ ಮೀರಿ ಜಲ್ಲಿಕಲ್ಲು ಸಾಗಣೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 3:27 IST
Last Updated 12 ಜುಲೈ 2020, 3:27 IST
ಬೆಟ್ಟದಪುರ-ಪಿರಿಯಾಪಟ್ಟಣ ಮುಖ್ಯರಸ್ತೆಯಲ್ಲಿ ಟಿಪ್ಪರ್ ಲಾರಿ ಯಲ್ಲಿ ಅಗತ್ಯಕ್ಕಿಂತ ಹೆಚ್ಚು ಜಲ್ಲಿಕಲ್ಲನ್ನು ಲೋಡ್ ಮಾಡಿ ಚಲಿಸುತ್ತಿರುವುದು.
ಬೆಟ್ಟದಪುರ-ಪಿರಿಯಾಪಟ್ಟಣ ಮುಖ್ಯರಸ್ತೆಯಲ್ಲಿ ಟಿಪ್ಪರ್ ಲಾರಿ ಯಲ್ಲಿ ಅಗತ್ಯಕ್ಕಿಂತ ಹೆಚ್ಚು ಜಲ್ಲಿಕಲ್ಲನ್ನು ಲೋಡ್ ಮಾಡಿ ಚಲಿಸುತ್ತಿರುವುದು.   
ಬೆಟ್ಟದಪುರ: ಪಿರಿಯಾಪಟ್ಟಣ- ಬೆಟ್ಟದಪುರ ಮುಖ್ಯರಸ್ತೆಯಲ್ಲಿ ಲಾರಿ ಮತ್ತು ಟ್ರಾಕ್ಟರ್‌ನಲ್ಲಿ ಜಲ್ಲಿ ಕಲ್ಲುಗಳನ್ನು ಸಾಮರ್ಥ್ಯಕ್ಕೂ ಮೀರಿ ತುಂಬಿಕೊಂಡು ಸಾಗುವಾಗ ಕೆಳಗೆ ಬಿದ್ದ ಕಲ್ಲುಗಳಿಂದ ದ್ವಿಚಕ್ರ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ.
ಒಂದು ವಾರದಿಂದ ಜಲ್ಲಿಕಲ್ಲು ಸಾಗಣೆ ಹೆಚ್ಚಾಗಿದ್ದು ವಿಪರೀತ ಕಲ್ಲುಗಳು ಮುಖ್ಯರಸ್ತೆಯಲ್ಲಿ ಬೀಳುತ್ತಿರುವದರಿಂದ ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆಗಿ ಬೀಳುತ್ತಿದ್ದಾರೆ. ಪಾದಚಾರಿಗಳು ಸಹ ಕಲ್ಲು ರಸ್ತೆಯಲ್ಲಿ ದಾಟಿದಂತೆ ಆಗುತ್ತಿದೆ. ಚಪ್ಪಲಿ ಸಹ ಕಿತ್ತು ಹೋಗುತ್ತಿವೆ ಎಂದು ಸಮಸ್ಯೆ ಬಗ್ಗೆ ಹೇಳುತ್ತಿದ್ದಾರೆ.
ಪ್ರತಿದಿನ ಕನಿಷ್ಠ 20 ರಿಂದ 30 ಟ್ರಾಕ್ಟರ್ ಮತ್ತು ಲಾರಿಗಳು ಸಾಗುತ್ತಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ವಹಿಸದಿರುವುದು ಕೆಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೆ ಡಸ್ಟ್‌ (ಕಲ್ಲು ಪುಡಿ) ಸಾಗಣೆ ಸಂದರ್ಭದಲ್ಲಿಯೂ ಸಹ ಯಾವುದೇ ಟಾರ್ಪಲ್ ಅಥವಾ ಪ್ಲಾಸ್ಟಿಕ್ ಅನ್ನು ಮುಚ್ಚದೆ ಹಾಗೇ ಹೋಗುತ್ತಿದ್ದು, ಗಾಳಿಗೆ ಕಲ್ಲು ಪುಡಿ ಹಿಂದೆ ಬರುವ ಸವಾರರ ಕಣ್ಣಿಗೆ ಬಿದ್ದು ಬಿದ್ದು ಹೋಗುವ ಭೀತಿ ಎದುರಾಗಿದೆ.
ಬೆಟ್ಟದಪುರ ಮುಖ್ಯ ಸರ್ಕಲ್‌ನಲ್ಲಿ ಟಿಪ್ಪರ್ ಮತ್ತು ಟ್ರಾಕ್ಟರ್‌ನಿಂದ ಬೀಳುವ ಜಲ್ಲಿಕಲ್ಲಿನಿಂದ ಪ್ರತಿ ದಿನ ಓಡಾಡುವ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಕ್ಷಣವೇ ಸೂಕ್ತ ವ್ಯವಸ್ಥೆ ಮಾಡಿ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಗ್ರಾಮದ ಮುಖಂಡ ಪ್ರವೀಣ್‌ಕುಮಾರ್ ಮನವಿ ಮಾಡಿದರು.
‘ರಾಜ್ಯ ಹೆದ್ದಾರಿಯಲ್ಲಿ ವೇಗದ ಮಿತಿ ಪಾಲಿಸದೇ, ಅಗತ್ಯಕ್ಕಿಂತ ಹೆಚ್ಚು ಲೋಡ್ ಮಾಡಿ ಸಾಗಿಸುತ್ತಿದ್ದು, ಇದರಿಂದ ಜಲ್ಲಿಕಲ್ಲು ಕೆಳಗೆ ಬಿದ್ದು ಅನಾಹುತಗಳು ಆಗುತ್ತಿವೆ’ ಎಂದು ಬಿಜೆಪಿ ಮುಖಂಡ ಸುನೀಲ್‌ಕುಮಾರ್ ದೂರಿದ್ದಾರೆ.
‘ಪಟ್ಟಣದ ಹೊರವಲಯದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಹೊರ ಜಿಲ್ಲೆ, ತಾಲ್ಲೂಕುಗಳಿಗೆ ಜಲ್ಲಿಕಲ್ಲು, ಪುಡಿಯನ್ನು ಯಥೇಚ್ಛವಾಗಿ ಸಾಗಣೆಯಾಗುತ್ತಿರುವುದರಿಂದ ಕ್ರಷರ್ ಮಾಲೀಕರು, ಲಾರಿ ಮತ್ತು ಟ್ರಾಕ್ಟರ್ ಚಾಲಕರು ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.