ಕೆ.ಆರ್.ನಗರ: ‘ಕೃಷಿ ಚಟುವಟಿಕೆಗೆ ಸಂಬಂಧಿಸಿರುವ ಬಿತ್ತನೆ ಬೀಜ, ರಸ ಗೊಬ್ಬರ, ಔಷಧಿಯನ್ನು ಸರ್ಕಾರ ನಿಗದಿಪಡಿಸಿರುವ ದರದಲ್ಲಿಯೇ ಮಾರಾಟ ಮಾಡಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು.
ಇಲ್ಲಿನ ಕೃಷಿ ಇಲಾಖೆ ಕಚೇರಿಯಲ್ಲಿ ಶನಿವಾರ ನಡೆದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಮಾರಾಟಗಾರರು ಅಂಗಡಿ ಮುಂದೆ ಕಡ್ಡಾಯವಾಗಿ ದರಪಟ್ಟಿಯುಳ್ಳ ನಾಮಫಲಕ ಹಾಕಬೇಕು. ಕೃಷಿ ಪರಿಕರ ಖರೀದಿದಾರರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ರಸಗೊಬ್ಬರ ಅಭಾವ ಸೃಷ್ಟಿಸಬಾರದು. ಒಂದು ವೇಳೆ ಅಭಾವ ಸೃಷ್ಟಿಸುತ್ತಿರುವುದು ಕಂಡು ಬಂದಲ್ಲಿ ಅಂಗಡಿ ಪರವಾನಿಗೆ ರದ್ದುಪಡಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಹಣ ವಸೂಲಿ ಮಾಡುವುದು, ಅವಧಿ ಮುಗಿದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಮಾಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಆಧಾರ್ ಪಡೆದು ರಸಗೊಬ್ಬರ ವಿತರಿಸಬೇಕು. ರೈತರ ಜೊತೆ ಸಂಯಮದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ಬೆಳೆಹಾನಿಯಿಂದ ತಪ್ಪಿಸಿಕೊಳ್ಳಲು ರೈತರು ಕಡ್ಡಾಯವಾಗಿ ಪ್ರಧಾನಮಂತ್ರಿ ಫಸಲು ಭೀಮಾ ವಿಮೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೃಷಿ ವಿಜ್ಞಾನಿ ಡಾ.ರಾಜಣ್ಣ, ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ, ರಾಜ್ಯ ರೈತ ಪರ್ವ ಸಂಘದ ಗೌರವ ಅಧ್ಯಕ್ಣ ಜೆ.ಎಂ.ಕುಮಾರ್ ಮಾತನಾಡಿದರು.
ಕೃಷಿಕ ಸಮಾಜ ಅಧ್ಯಕ್ಷರಾದ ದಿವಾಕರ್, ಅಣ್ಣೇಗೌಡ, ನಿರ್ದೇಶಕಿ ಚಂದಗಾಲು ರಾಜಲಕ್ಷ್ಮೀ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಶ್ರೀಕಾಂತ್, ಪ್ರಸನ್ನ, ರೈತ ಮುಖಂಡರಾದ ಅರ್ಜುನಹಳ್ಳಿ ರಾಮಪ್ರಸಾದ್, ಸಿ.ಕೆ.ರವೀಂದ್ರ, ನಾಗೇಶ್, ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.