ADVERTISEMENT

ನಾಳೆ ಕಬ್ಬು ಬೆಳೆಗಾರರ ಪ್ರತಿಭಟನೆ: ಸಿಎಂಗೆ ರೈತರಿಂದ ಕಪ್ಪು ಬಾವುಟ

ನಾಳೆ ಪ್ರತಿಭಟನೆಗೆ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:36 IST
Last Updated 25 ಜುಲೈ 2024, 14:36 IST
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ನಡೆದ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ನಡೆದ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಮೈಸೂರು: ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜುಲೈ 26ರ ಸಂಜೆ ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪುಬಾವುಟ ಪ್ರದರ್ಶಿಸಲು ರಾಜ್ಯ ಕಬ್ಬು ಬೆಳೆಗಾರರ ಸಂಘದವರು ನಿರ್ಧರಿಸಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ಪ್ರತಿಭಟನೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಯಿತು.

‘ಅಹೋರಾತ್ರಿ ಧರಣಿ ನಡೆಸಿದ್ದ ರೈತರಿಗೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳದ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ವಿರುದ್ಧ ಹೋರಾಟ ಅನಿವಾರ್ಯವಾಗಿದೆ’ ಎಂದು ತೀರ್ಮಾನಿಸಲಾಯಿತು.

ADVERTISEMENT

ಸಭೆಯಲ್ಲಿ ಮಾತನಾಡಿದ ಭಾಗ್ಯರಾಜ್‌, ‘ಪ್ರಸಕ್ತ ಸಾಲಿಗೆ ಟನ್‌ ಕಬ್ಬಿಗೆ ₹ 4ಸಾವಿರ ಮುಂಗಡವನ್ನು ಸಕ್ಕರೆ ಕಾರ್ಖಾನೆಗಳಿಂದ ಕೊಡಿಸಬೇಕು. ಸರ್ಕಾರದ ಆದೇಶದಂತೆ ಕಳೆದ ಸಾಲಿನ ಲಾಭಾಂಶ ಟನ್‌ಗೆ ₹ 150 ಬಾಕಿ ಕೊಡಿಸಬೇಕು. ಸಕ್ಕರೆ ಕಾರ್ಖಾನೆಗಳ ಮುಖ್ಯ ದ್ವಾರದಲ್ಲಿ ಎಪಿಎಂಸಿಯಿಂದಲೇ ತೂಕದ ಯಂತ್ರ ಅಳವಡಿಸಬೇಕು. ಅಂತರ ಜಿಲ್ಲಾ ಕಬ್ಬು ಸಾಗಣೆಗೆ ನಿರ್ಬಂಧ ಹೇರಬಾರದು’ ಎಂದು ಒತ್ತಾಯಿಸಿದರು.

ಹಕ್ಕೊತ್ತಾಯಗಳೇನು?

‘ಕೇಂದ್ರ ಸರ್ಕಾರವು ಎಫ್‌ಆರ್‌ಪಿಯನ್ನು (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ದರ) ₹3,400 ನಿಗದಿಪಡಿಸಿರುವುದು ರೈತರಿಗೆ ಮಾಡಿದ ದ್ರೋಹವಾಗಿದ್ದು, ಕೂಡಲೇ ಇದನ್ನು ಮರುಪರಿಶೀಲಿಸಬೇಕು. ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಲಾಭಾಂಶ ಮತ್ತು ಖರ್ಚಿನ ಬ್ಯಾಲೆನ್ಸ್ ಶೀಟ್‌ ಬಗ್ಗೆ ತನಿಖೆ ನಡೆಸಿ ರೈತರಿಗೆ ನ್ಯಾಯ ಕೊಡಿಸಬೇಕು. ಕಬ್ಬು ಕಟಾವು ಹಾಗೂ ಸಾಗಣೆ ಕೂಲಿಯನ್ನು ಮನಬಂದಂತೆ ನಿಗದಿಪಡಿಸಿ ರೈತರನ್ನು ಕಾರ್ಖಾನೆಗಳು ಸುಲಿಗೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಹಾಗೂ ಕೆರೆ– ಕಟ್ಟೆಗಳಿಗೆ ಕಳೆದ ವರ್ಷ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯದಿಂದ ನೀರು ಹರಿಸದೇ ತಮಿಳುನಾಡಿಗೆ ಕೊಟ್ಟು ವಂಚಿಸಲಾಯಿತು. ಈ ಬಾರಿ ಅದಕ್ಕೆ ಅವಕಾಶ ಕೊಡಬಾರದು. ಷರತ್ತು ವಿಧಿಸದೇ ನಾಲೆಗಳಿಗೆ ನೀರು ಹರಿಸಿ ಕೃಷಿ ಚಟುವಟಿಕೆಗಳಿಗೆ ಸಹಕರಿಸಬೇಕು’ ಎಂದರು.

‘ನಾಲೆಗಳ ಸಮೀಪದಲ್ಲಿ ಕೊಳವೆಬಾವಿ ಕೊರೆಯಬಾರದು ಮತ್ತು ನಾಲೆಯಿಂದ ಮೋಟಾರ್‌ಗಳ ಮೂಲಕ ನೀರೆತ್ತಬಾರದು ಎಂಬ ನಿಯಮ ರೈತರಿಗೆ ಮಾರಕವಾಗಿದೆ. ರೈತರ ಜಮೀನನ್ನು ವಶಪಡಿಸಿಕೊಂಡು ನಾಲೆಗಳನ್ನು ನಿರ್ಮಿಸಲಾಗಿದೆ. ಹೀಗಿರುವಾಗ, ಕೃಷಿಗೆ ನೀರು ಬಳಸಲು ಮುಂದಾಗುವವರ ವಿರುದ್ಧ ಕ್ರಮ ಜರುಗಿಸಲು ಮುಂದಾದರೆ ಕಾನೂನು ಭಂಗ ಚಳವಳಿ ನಡೆಸಬೇಕಾಗುತ್ತದೆ. ಆದ್ದರಿಂದ ಈ ನಿಯಮವನ್ನು ಜಲಸಂಪನ್ಮೂಲ ಸಚಿವರು ಪುನರ್‌ ಪರಿಶೀಲಿಸಬೇಕು. ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ಯೋಜನೆ ಮರು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಭರವಸೆ ಕೊಟ್ಟಿದ್ದರು: ‘ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 16ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಿದ್ದೆವು. ಆಗ, ನಮ್ಮನ್ನು ಭೇಟಿಯಾಗಿದ್ದ ಜಿಲ್ಲಾಧಿಕಾರಿ ಜುಲೈ 27ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸುತ್ತೇವೆ ಎಂದು ಹೇಳಿದ್ದರು. ಆದರೆ, ಈ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲ. ಹೀಗಾಗಿ, ಮುಖ್ಯಮಂತ್ರಿಗೆ ಮುತ್ತಿಗೆ ಹಾಕಿ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

ಮುಖಂಡರಾದ ಕೆರೆಹುಂಡಿ ರಾಜಣ್ಣ, ಅಂಕನಹಳ್ಳಿ ತಿಮ್ಮಪ್ಪ, ದೇವೇಂದ್ರ ಕುಮಾರ್, ನಾಗರಾಜ್, ಹಾಡ್ಯ ರವಿ, ಶಿವರುದ್ರಪ್ಪ, ಅಂಬಳೆ ಮಹದೇವಸ್ವಾಮಿ, ಎಂ.ವಿ. ಕೃಷ್ಣಪ್ಪ, ಸೋಮಣ್ಣ, ಕೆರೆಹುಂಡಿ ಶಿವಣ್ಣ, ದೇವಿರಮ್ಮನಹಳ್ಳಿ ಹುಂಡಿ ಮಹೇಶ್, ಮಲಿಯೂರು ಮಹೇಂದ್ರ, ಪ್ರವೀಣ್, ಶ್ರೀಕಂಠ, ಹೊನ್ನಹಳ್ಳಿ ಬಸವಣ್ಣ, ಕಿರುಗುಂದ ಸ್ವಾಮಿ, ಮಹೇಶ್, ಲಕ್ಷ್ಮಣ, ಸ್ವಾಮಿ, ರವಿ, ಎಂ. ಸಿದ್ದರಾಜು, ಮೂಡ್ನಾಕೂಡು ಸೋಮೇಶ್, ಗುರುವಿನಪುರ ಮೋಹನ್ ಚಂದ್ರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.