ADVERTISEMENT

ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಪ್ರತಿಭಟನೆ

ರೈತರ ಬೃಹತ್ ಸಮಾವೇಶ ಜುಲೈ 21ಕ್ಕೆ ಬೆಳಗಾವಿಯಲ್ಲಿ: ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 16:18 IST
Last Updated 9 ಜುಲೈ 2019, 16:18 IST

ಮೈಸೂರು: ‘ಅಧಿಕಾರದ ಆಸೆಗಾಗಿ ಮಾರಾಟದ ಸರಕಾಗಿರುವ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

‘ಸ್ವಾರ್ಥಕ್ಕಾಗಿ ಶಾಸಕರು ರಾಜೀನಾಮೆ ನೀಡಿದ್ದು, ಕ್ಷೇತ್ರದ ಮತದಾರರಿಗೆ ಅಪಮಾನ ಮಾಡಿದ್ದಾರೆ. ಕರ್ನಾಟಕದ ರಾಜಕಾರಣ ಎಂದರೇ ಮೌಲ್ಯದ ಪರಂಪರೆ ಎನ್ನುವಂತಿತ್ತು. ಇದೀಗ ದೇಶದಲ್ಲೇ ತಲೆ ತಗ್ಗಿಸುವ ಘಟನಾವಳಿ ನಡೆದಿವೆ’ ಎಂದು ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ರಾಜೀನಾಮೆ ನೀಡಿದ ಯಾವೊಬ್ಬ ಶಾಸಕನೂ ಇದೂವರೆಗೆ ತಮ್ಮ ಕ್ಷೇತ್ರದ ಮತದಾರರಿಗೆ ಸಕಾರಣ ಕೊಟ್ಟಿಲ್ಲ. ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಸಕಾರಣ ನೀಡಲೇಬೇಕು. ಕ್ಷೇತ್ರದ ಮತದಾರರು ಸಹ ರಾಜೀನಾಮೆ ಸ್ವೀಕರಿಸಬಾರದು ಎಂದು ಸ್ಪೀಕರ್‌ಗೆ ಆಕ್ಷೇಪ ಸಲ್ಲಿಸಬೇಕು’ ಎಂದು ನಾಗೇಂದ್ರ ಮನವಿ ಮಾಡಿದರು.

ADVERTISEMENT

ಸಮಾವೇಶ: ‘ಜುಲೈ 21ರಂದು ಬೆಳಗಾವಿಯಲ್ಲಿ 39ನೇ ರೈತ ಹುತಾತ್ಮ ದಿನಾಚರಣೆ ನಡೆಸಲಾಗುವುದು. ಈ ಸಂದರ್ಭ ರೈತರ ಬೃಹತ್ ಸಮಾವೇಶ ನಡೆಸಿ, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು’ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

‘ರೈತ ಚಳವಳಿಗೆ ಹೊಸ ಸ್ವರೂಪ ನೀಡುವ ಚಿಂತನೆ ನಡೆದಿದೆ. ಬರಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ತೊಡಲು ನಿರ್ಧರಿಸಲಾಗಿದ್ದು, ಜಲತಜ್ಞ ರಾಜೇಂದ್ರಸಿಂಗ್ ಅವರಿಂದಲೇ ಸಮಾವೇಶಕ್ಕೆ ಚಾಲನೆ ಕೊಡಿಸಲಾಗುತ್ತಿದೆ. ರೈತರ ಆರ್ಥಿಕ ಶಕ್ತಿ ಹೆಚ್ಚಿಸಲು ಯಾವ ಕ್ರಮ ತೆಗೆದುಕೊಳ್ಳಬೇಕು. ರೈತರು ಬೆಳೆದ ವಿವಿಧ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ಶಕ್ತಿ ತುಂಬಲು ಯೋಜಿಸಲಾಗಿದೆ. ಇದಕ್ಕಾಗಿಯೇ ಹೋರಾಟಗಾರರು, ಸಮಾಜಮುಖಿ ಚಿಂತಕರು, ಪರಿಣಿತರನ್ನೊಳಗೊಂಡ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.

ರೈತ ಸಂಘದ ಮುಖಂಡರಾದ ಎಂ.ಮಂಜುನಾಥ್‌ಗೌಡ, ಎಂ.ಎಸ್.ಅಶ್ವಥನಾರಾಯಣರಾಜೇ ಅರಸು, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಕಾರ್ಯದರ್ಶಿ ಹೊಸಕೋಟೆ ಬಸವರಾಜು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.