ADVERTISEMENT

ನಂಜನಗೂಡು: ಭೂಮಿ ಕಳೆದುಕೊಂಡ ರೈತರಿಗೆ ಕೆಲಸ ಕೊಡಲೇಬೇಕು

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಮತ, ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:00 IST
Last Updated 18 ಜನವರಿ 2021, 1:00 IST
ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದ ಏಷಿಯನ್ ಪೇಂಟ್ಸ್ ಕಾರ್ಖಾನೆ ಮುಂಭಾಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು
ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದ ಏಷಿಯನ್ ಪೇಂಟ್ಸ್ ಕಾರ್ಖಾನೆ ಮುಂಭಾಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು   

ನಂಜನಗೂಡು: ‘ಏಷಿಯನ್ ಪೇಂಟ್ಸ್ ಕಾರ್ಖಾನೆಗಾಗಿ ಭೂಮಿ ನೀಡಿದ ರೈತ ಕುಟುಂಬದವರಿಗೆ ಕಾರ್ಖಾನೆ ಆಡಳಿತ ಮಂಡಳಿ ನಿಯಮದಂತೆ ಉದ್ಯೋಗ ನೀಡಲೇಬೇಕು. ಈ ವಿಚಾರದಲ್ಲಿ ನಾನು ಯಾವಾಗಲೂ ಕಾರ್ಮಿಕ ಹಾಗೂ ರೈತರ ಪರವಾಗಿದ್ದೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದ ಏಷಿಯನ್ ಪೇಂಟ್ಸ್ ಕಾರ್ಖಾನೆ ಮುಂಭಾಗ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಅವರು, ‘ಕಾರ್ಖಾನೆಗಾಗಿ 175 ಎಕರೆ ಭೂಮಿ ನೀಡಿದ ಎಲ್ಲ ರೈತ ಕುಟುಂಬದ ಸದಸ್ಯರಿಗೆ ಕಾರ್ಖಾನೆ ಉದ್ಯೋಗ ನೀಡಲೇಬೇಕು’ ಎಂದು ಹೇಳಿದರು.

‘ನಮ್ಮ ಸರ್ಕಾರದ ಅಧಿಕಾರದ ಅವಧಿಯಲ್ಲಿ ಏಷಿಯನ್ ಪೇಂಟ್ಸ್‌ ಕಾರ್ಖಾನೆ ಸ್ಥಾಪನೆಗೆ ಬೇಕಾದ ಜಮೀನು, ಸವಲತ್ತುಗಳನ್ನು ನೀಡಿ ಆರ್.ವಿ.ದೇಶಪಾಂಡೆ ಮತ್ತು ನಾನು ಸೇರಿ ಶಂಕುಸ್ಥಾಪನೆ ನೆರವೇರಿಸಿದ್ದೆವು. ನಿಯಮದಂತೆ ಉದ್ಯೋಗ ನೀಡುವ ಒಪ್ಪಂದ ಮಾಡಿಕೊಂಡು ಪರವಾನಗಿ ನೀಡಲಾಗಿತ್ತು. ನಮ್ಮ ಸರ್ಕಾರ ಹೋದ ಮೇಲೆ ಕಾರ್ಖಾನೆಯವರಿಗೆ ರೆಕ್ಕೆ ಪುಕ್ಕ ಬಂದಿವೆ. ನಿಯಮದಂತೆ ಹೇಳಿದ ಮಾತಿನಂತೆ ನಿಯತ್ತಾಗಿ ನಡೆದುಕೊಳ್ಳುತ್ತಿಲ್ಲ. ನಾಟಕ ಆಡಬೇಡಿ ಮಾತಿನಂತೆ ನಡೆದುಕೊಳ್ಳಿ’ ಎಂದು ಎಚ್ಚರಿಸಿದರು.

ADVERTISEMENT

‘ಭೂಮಿ ಕಳೆದುಕೊಂಡ ಪ್ರತಿ ರೈತ ಕುಟುಂಬದ ಸದಸ್ಯರೊಬ್ಬರಿಗೆ ಕೆಐಎಡಿಬಿಯ ದಾಖಲೆಯಲ್ಲಿರುವ ಪಟ್ಟಿಯಂತೆ ಉದ್ಯೋಗ ಸಿಗಲಿದೆ. ಉದ್ಯೋಗ ನೀಡದಿದ್ದರೆ ನಾನು ನಿಮ್ಮ ಜೊತೆಗಿದ್ದೇನೆ. ನ್ಯಾಯ ಸಿಗುವವರೆಗೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ರೈತ ಸಂಘದ ಮುಖಂಡ ಹೊಸ ಕೋಟೆ ಬಸವರಾಜು ಮಾತನಾಡಿ, ‘ಕಳೆದ 57 ದಿನಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಕಾರ್ಖಾನೆ ಆಡಳಿತ ಮಂಡಳಿ ನಿಯಮದಂತೆ ನಡೆದುಕೊಂಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ನನ್ನ 40 ವರ್ಷಗಳ ಹೋರಾಟದಲ್ಲಿ ಇಂಥ ಸುಧೀರ್ಘ ಹೋರಾಟ ಕಂಡಿರಲಿಲ್ಲ. ನ್ಯಾಯಯುತ ಬೇಡಿಕೆಯನ್ನು ಹೋರಾಟ ಮಾಡಿ ಪಡೆದುಕೊಳ್ಳುವುದಾದರೆ ಸರ್ಕಾರಗಳು, ಜನಪ್ರತಿನಿಧಿಗಳು ಏಕೆ ಬೇಕು? ಸೋಮವಾರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತ ಮುಖಂಡರ ಸಭೆ ನಡೆದು ತೀರ್ಮಾನವಾಗಲಿದೆ. ಹೋರಾಟಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದರು.

ಶಾಸಕ ಡಾ.ಯತೀಂದ್ರ, ಸಮಾಜವಾದಿ ಪ.ಮಲ್ಲೇಶ್‌, ಜನ ಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ, ನಾರಾಯಣಸ್ವಾಮಿ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಬಿ.ಎಂ.ರಾಮು, ಹುಳಿಮಾವು ಪರಶಿವಮೂರ್ತಿ, ಮಹೇಶ್ ಕುಮಾರ್,ಸಿ. ಆರ್ ಮಹದೇವು , ಬಿ.ಪಿ. ಮಹದೇವು, ಹುಚ್ಚೇಗೌಡ, ಎಂ.ಮಹದೇವು , ಬಿ. ಆರ್ ರಾಕೇಶ್, ದಕ್ಷಿಣಾಮೂರ್ತಿ, ಟಿ.ವಿ.ಎಸ್ ಮಂಜುನಾಥ್, ಎಂ ಅಣ್ಣಯ್ಯ ಗ್ರಾ.ಪಂ ಸದಸ್ಯರುಗಳಾದ ಟಿ. ಜೆ ಮಹದೇವು, ಶಿವರಾಜು ,ಮಾದಪ್ಪ, ಟಿ. ಕೆ ನಾಗೇಶ ಚಂದ್ರ ,ಯಶವಂತ, ರವಿ, ನಂಜುಂಡ, ಮಹದೇವಸ್ವಾಮಿ, ಶ್ರೀಕಂಠಸ್ವಾಮಿ, ಪ್ರಭು ಬಿ.ಬಿ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.