ADVERTISEMENT

ಮೈಸೂರು | ತಂದೆಯಿಲ್ಲದ ದುಃಖ; ಭವಿಷ್ಯದ ಚಿಂತೆಯಲ್ಲಿ ಅಕ್ಕ– ತಂಗಿ!

ಅವೈಜ್ಞಾನಿಕ ಹಂಪ್‌ನಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ತಂದೆ ಕುಮಾರ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 14:04 IST
Last Updated 3 ಫೆಬ್ರುವರಿ 2024, 14:04 IST
ಕುಮಾರ್‌
ಕುಮಾರ್‌   

ಮೈಸೂರು: ತರಕಾರಿ ಮಾರಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಸಾವಿನ ಬಳಿಕ ಅವರ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಅವೈಜ್ಞಾನಿಕ ಹಂಪ್‌ನಿಂದಾಗಿ ಸಂಭವಿಸಿದ ಅಪಘಾತದಿಂದಾಗಿ ಬಡ ಕುಟುಂಬವೊಂದು ಮನೆಗೆ ಆಧಾರವಾಗಿದ್ದ ಯಜಮಾನನ್ನು ಕಳೆದುಕೊಂಡಿದೆ.

ಎಚ್.ಡಿ.ಕೋಟೆಯ ಕೃಷ್ಣಯ್ಯನ ಹುಂಡಿಯ ನಿವಾಸಿ ಕುಮಾರ್‌ (40) ಮೈಸೂರಿನ ಗನ್‌ಹೌಸ್‌ ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ತಮ್ಮೂರಿನ ಬೀದಿಯಲ್ಲಿ ಮಾರಿ ಜೀವನ ನಡೆಸುತ್ತಿದ್ದರು. ಅಲ್ಪ ಲಾಭದಲ್ಲಿ ಬೆಟ್ಟದಷ್ಟು ಜವಾಬ್ದಾರಿ ಅವರಿಗಿತ್ತು.

ತಂದೆ ಬಸವರಾಜು ಕಿಡ್ನಿ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಯಲ್ಲೇ ಇದ್ದಾರೆ. ತಾಯಿಯೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. ಇಬ್ಬರು ಹೆಣ್ಣು ಮಕ್ಕಳಿದ್ದು, ಪತ್ನಿ ಮಣಿ ಅವರ ಜೊತೆಗೂಡಿ ಸಂಸಾರ ನಡೆಸುತ್ತಿದ್ದರು.

ADVERTISEMENT

ಇರುವ ಸಣ್ಣ ಜಮೀನಿನಲ್ಲೂ ಆದಾಯ ಇಲ್ಲದಿರುವುದರಿಂದ ಕುಮಾರ್‌ ಅವರು ತರಕಾರಿ ಮಾರಾಟವನ್ನೇ ನೆಚ್ಚಿಕೊಂಡಿದ್ದರು ಶನಿವಾರ (ಜ.27)ರಂದು ಸಂಜೆ ಮಾರುಕಟ್ಟೆಯಿಂದ ತರಕಾರಿ ತರಲು ನಗರದ ಗನ್‌ಹೌಸ್‌ಗೆ ದುಗ್ಗೇಶ್‌ ಅವರ ಗೂಡ್ಸ್‌ ಆಟೊದಲ್ಲಿ ಹೊರಟಿದ್ದರು.

ನಗರದ ಆಯಿಷ್‌ ಸಂಸ್ಥೆ ಮುಂಭಾಗದ ಇಳಿ ಜಾರಿನಲ್ಲಿದ್ದ ರಸ್ತೆ ಉಬ್ಬು ದಾಟುವಾಗ ಆಟೊ ನಿಯಂತ್ರಣ ತಪ್ಪಿ ಮಗುಚಿ, ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಯ ಮೇಲೆ ಬಿದ್ದು ವಿರುದ್ಧ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಕೆ.ಆರ್‌ ಆಸ್ಪತ್ರೆಗೆ ಸೇರಿಸಲಾಗಿತ್ತು.

‘ರಾತ್ರಿಯೇ ಅಪಘಾತವಾದರೂ ನಮಗೆ ಮಾಹಿತಿ ತಿಳಿದಿರಲಿಲ್ಲ. ಬೆಳಿಗ್ಗೆ 9ಕ್ಕೆ ಆತ ಮೃತಪಟ್ಟಿದ್ದಾನೆ ಎಂದು ಮಾಹಿತಿ ಬಂದಿದೆ. ಆಟೊ ಚಾಲಕನೂ ಪರಾರಿಯಾಗಿದ್ದು ಪತ್ತೆಯಾಗಿಲ್ಲ’ ಎಂದು ಕುಮಾರ್‌ ತಮ್ಮ ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಗ್ಯದ ಸಮಸ್ಯೆಯಿರುವ ತನ್ನ ತಂದೆ, ತಾಯಿ. ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಹೀಗೆ ಅನೇಕ ಸಮಸ್ಯೆಗಳ ನಡುವೆಯೇ ಸಂಸಾರದ ತೇರು ಎಳೆಯುತ್ತಿದ್ದ ಜೀವ ಯಾರದ್ದೋ ತಪ್ಪಿಗೆ ಪ್ರಾಣ ಕಳೆದುಕೊಂಡಿದೆ.

ಕೆ.ಆರ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲು

‘ಹಂಪ್‌ನಿಂದಾಗಿ ಉಂಟಾದ ಅಪಘಾತದಲ್ಲಿ ಮೃತಪಟ್ಟಿದ್ದ ಕಾರಣ ಕೆ.ಆರ್‌ ಸಂಚಾರ ಠಾಣೆಯಲ್ಲಿ ದೂರು ನೀಡಿದ್ದೇವೆ. ಹಂಪ್‌ ನಿರ್ಮಿಸಿದ ಪಾಲಿಕೆಯ ಎಂಜಿನಿಯರ್‌ ಗುತ್ತಿಗೆದಾರ ಹಾಗೂ ಗೂಡ್ಸ್‌ ಆಟೊ ಚಾಲಕ ದುಗ್ಗೇಶ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನಿನ ಮೇಲೆ ನಂಬಿಕೆಯಿದೆ. ತನಿಖೆಯಾಗದೇ ಹೋದರೆ ಅಣ್ಣನ ಸಾವಿಗೆ ನ್ಯಾಯ ದೊರಕುವುದಿಲ್ಲ’ ಎಂದು ಭಾಸ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾಭ್ಯಾಸ ಮೊಟಕಾಗುವ ಆತಂಕ

ಕುಮಾರ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ರಕ್ಷಿತಾ ಮಹಾರಾಣಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು ಇನ್ನೊಬ್ಬಾಕೆ ರಂಜಿತಾ ಊರಿನಲ್ಲಿರುವ ಸುಬ್ಬಣ್ಣ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾಳೆ. ‘ತಂದೆ ಮೃತಪಟ್ಟಿರುವುದರಿಂದ ಅವರ ಶಿಕ್ಷಣ ಮುಂದುವರಿಸುವುದಕ್ಕಾಗಿ ಹಣ ಹೊಂದಿಸುವುದು ಕಷ್ಟಸಾಧ್ಯವಾಗಿದೆ’ ಎನ್ನುತ್ತಾರೆ ಭಾಸ್ಕರ್. ಇಬ್ಬರ ವಿದ್ಯಾಭ್ಯಾಸ ಮೊಟಕಾಗುವ ಆತಂಕ ಕಾಡಿದೆ.

ಅಣ್ಣ ಮೃತಪಟ್ಟ ಬಳಿಕ ಯಾವ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ ಸಹಾಯ ಬೇಕಿದೆ.
ಭಾಸ್ಕರ್‌ ಕುಮಾರ್‌ ಅವರ ತಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.