ADVERTISEMENT

‘ಮಾಡದ ತಪ್ಪಿಗೆ ದಂಡ ಹಾಕ್ತ್ವಾರೆ; ಸಂಬಳ ಕಟ್‌ ಮಾಡ್ತ್ವಾರೆ’

ಡ್ರೈವರ್‌ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆಯಬಾರದಾ; ಹೆಂಡತಿ–ಮಕ್ಕಳು ಹೊಟ್ಟೆ ತುಂಬಾ ಊಟ ಮಾಡಬಾರದಾ?

ಡಿ.ಬಿ, ನಾಗರಾಜ
Published 9 ಏಪ್ರಿಲ್ 2021, 2:19 IST
Last Updated 9 ಏಪ್ರಿಲ್ 2021, 2:19 IST
ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಗುರುವಾರ ಪ್ರಯಾಣಿಕರು ಬಸ್‌ಗಾಗಿ ಕಾದು ಕುಳಿತಿದ್ದ ಚಿತ್ರಣ
ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಗುರುವಾರ ಪ್ರಯಾಣಿಕರು ಬಸ್‌ಗಾಗಿ ಕಾದು ಕುಳಿತಿದ್ದ ಚಿತ್ರಣ   

ಮೈಸೂರು: ‘ಸಮಯಕ್ಕೆ ಸರಿಯಾಗಿ ಬಸ್ ಡಿಪೋಗೆ ಹೋದರೂ ಡ್ಯೂಟಿನೇ ಕೊಡಲ್ಲ. ಯಾವ ರೂಟು ಖಾಲಿ ಇಲ್ಲ ಅಂತಾವ್ರೆ. ಅಲ್ಲಿಂದ ಹೊರ ಬರುತ್ತಿದ್ದಂತೆ ಹಾಜರಿಯಲ್ಲಿ ಆಬ್ಸೆಂಟ್‌ ಹಾಕ್ತ್ವಾರೆ. ನಮ್ಮದಲ್ಲದ ತಪ್ಪಿಗೆ ದಂಡ ವಿಧಿಸ್ತ್ವಾರೆ. ಸಂಬಳದಲ್ಲಿ ಕಟ್‌ ಮಾಡ್ತ್ವಾರೆ...’

‘ತರಬೇತಿ ಅವಧಿಯಿಂದ ಹಿಡಿದು ನಿವೃತ್ತರಾಗುವ ತನಕವೂ ನಮ್ಮದು ತಪ್ಪದ ಗೋಳು. ಪ್ರತಿ ತಿಂಗಳು ದಂಡ ಹಾಕೋದು, ಸಂಬಳ ಕಟ್‌ ಮಾಡೋದು ತಪ್ಪಿಲ್ಲ... ಇದೀಗ ನೋಟಿಸ್‌ನ ಬೆದರಿಕೆಯೊಡ್ಡಿ ಕೆಲಸಕ್ಕೆ ಕರೆಸಿಕೊಂಡಿದ್ದಾರೆ’ ಎಂದು ಮೈಸೂರು ನಗರ ಸಾರಿಗೆ ವಿಭಾಗದ ಚಾಲಕ ಕಂ ನಿರ್ವಾಹಕರೊಬ್ಬರು ನೋವಿನಿಂದ ನುಡಿದರು.

ಹಿನಕಲ್‌ನಿಂದ ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಗುರುವಾರ ಬಸ್‌ ಚಲಾಯಿಸಿಕೊಂಡು ಬಂದ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ಮನದಾಳದ ನೋವು ಹಂಚಿಕೊಂಡರು. ತಮ್ಮ ಕಷ್ಟಗಳ ಸರಮಾಲೆಯನ್ನೇ ಇಂಚಿಂಚು ಬಿಚ್ಚಿಟ್ಟರು. ಸಂಬಳದ ಚೀಟಿಯನ್ನು ಅವರು ಪ್ರದರ್ಶಿಸಿದರು.

ADVERTISEMENT

‘ಡಿಪೋದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಲ್ಲ. ಬಯೋಮೆಟ್ರಿಕ್‌ ನಮ್ಮಲ್ಲಿಲ್ಲ. ನಾವು ಏನೊಂದು ಪ್ರಶ್ನಿಸದಂತಹ ಸ್ಥಿತಿ ನಮ್ಮಲ್ಲಿದೆ’ ಎಂದ ಅವರು, ‘ಎಲ್ಲಿಯೂ ನನ್ನ ಹೆಸರು ಬಹಿರಂಗಪಡಿಸಬೇಡಿ’ ಎಂಬ ಷರತ್ತಿನೊಂದಿಗೆ ತಮ್ಮ ಮಾತು ಮುಂದುವರೆಸಿದರು.

‘ನೌಕರಿಗೆ ಸೇರಿ ಹತ್ತು ವರ್ಷವಾಯಿತು. ತರಬೇತಿ ಅವಧಿಯನ್ನೇ ಮೂರ್ನಾಲ್ಕು ವರ್ಷ ಮುಂದುವರೆಸಿದರು. ಪ್ರೊಬೇಷನರಿ ಘೋಷಿಸಲು ವರ್ಷಗಟ್ಟಲೇ ಎಳೆದಾಡುತ್ತಾರೆ. ಇಂದಿಗೂ ನನ್ನ ಬೇಸಿಕ್‌ ₹12,570 ಇದೆ. ₹22,180 ಸಂಬಳ ಸಿಗುತ್ತಿದೆ. ಏ.8 ಆದರೂ ಮಾರ್ಚ್‌ ತಿಂಗಳ ಸಂಬಳ ಕೊಟ್ಟಿಲ್ಲ. ಸ್ಯಾಲರಿ ಸ್ಲಿಪ್‌ ಕೊಟ್ಟಿದ್ದಾರಷ್ಟೇ. ಅದರಲ್ಲೇ ಮೂರು ಬಾರಿ ದಂಡ ಹಾಕಿದ್ದಾರೆ. ನಾಲ್ಕು ದಿನ ಆಬ್ಸೆಂಟ್‌ ತೋರಿಸಿ ಸಂಬಳ ಕಟ್‌ ಮಾಡಿದ್ದಾರೆ...’

‘ಸಿಲಿಂಡರ್ ದರ ₹ 1 ಸಾವಿರದ ಆಸುಪಾಸಿನಲ್ಲಿದೆ. ಅಡುಗೆ ಎಣ್ಣೆ 1 ಲೀಟರ್‌ಗೆ ₹170. 25 ಕೆ.ಜಿ. ತೂಕದ ಒಳ್ಳೆಯ ಅಕ್ಕಿಗೆ ₹1,500 ಕೊಡಬೇಕು. 1 ಲೀಟರ್‌ ಪೆಟ್ರೋಲ್‌ ದರ ₹93 ಇದೆ. ಇಂತಹ ಹೊತ್ತಲ್ಲಿ ನಮ್ಮಹೆಂಡತಿ–ಮಕ್ಕಳು ಹೊಟ್ಟೆ ತುಂಬಾ ಊಟ ಮಾಡೋಕೆ ಆಗುತ್ತಾ?’ ಎಂದು ಅವರು ಮನದಾಳದ ನೋವಿನ ನುಡಿಗಳನ್ನಾಡಿದರು. ಇದಕ್ಕೆ ಜೊತೆಯಲ್ಲಿದ್ದ ಸಿಬ್ಬಂದಿಯೂ ಧ್ವನಿಗೂಡಿಸಿದರು.

‘ಆರನೇ ವೇತನ ಆಯೋಗದ ಶಿಫಾರಸಿನಂತೆ ನಮಗೂ ಸಂಬಳ ಹೆಚ್ಚಿಸಿದರೆ ಮೂಲ ವೇತನವೇ ಕನಿಷ್ಠ ₹10 ಸಾವಿರ ಹೆಚ್ಚಲಿದೆ. ನಮ್ಮ ಹೆಂಡತಿ–ಮಕ್ಕಳು ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ಸಹಕಾರಿಯಾಗಲಿದೆ. ಆದರೆ, ನಮ್ಮ ಈ ಕೂಗು ಆಡಳಿತಾರೂಢರಿಗೆ ಯಾವಾಗಲೂ ಕೇಳದಾಗಿದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

‘ಅಧಿಕಾರಿಗಳಿಗೆ ಕೊಟ್ಟಂತೆ, ನಮಗೂ ಸಂಬಳ ಕೊಡಲಿ’

‘ಅಧಿಕಾರಿಗಳಿಗೆ ಅಡ್ಮಿನಿಸ್ಟ್ರೇಟಿವ್‌ ಆ್ಯಕ್ಟ್‌ನಡಿ, ಮೆಕ್ಯಾನಿಕ್‌ಗಳಿಗೆ ಇಂಡಸ್ಟ್ರೀಯಲ್‌ ಆ್ಯಕ್ಟ್‌ನಡಿ, ಚಾಲಕ ಹಾಗೂ ನಿರ್ವಾಹಕರಿಗೆ ಮೋಟಾರ್‌ ವೆಹಿಕಲ್‌ ಆ್ಯಕ್ಟ್‌ನಡಿ ಸಂಬಳ ಕೊಡುತ್ತಿದ್ದಾರೆ.’

‘ಶೇ 3ರಷ್ಟು ಸಂಬಳ ಹೆಚ್ಚಳ ಮಾಡಿದರೆ ಅಧಿಕಾರಿ ವರ್ಗಕ್ಕೆ ಆರನೇ ವೇತನ ಆಯೋಗ ಶಿಫಾರಸು ಮಾಡಿರುವ ಸಂಬಳವೇ ಸಿಗುತ್ತೆ. ನಮ್ಮ ಯಾವ ಬೇಡಿಕೆಯನ್ನೂ ಸರ್ಕಾರ ಈಡೇರಿಸೋದು ಬೇಡ. ಅಧಿಕಾರಿಗಳಿಗೆ ಕೊಟ್ಟಂತೆ ನಮಗೂ ಸಂಬಳ ಕೊಡಲಿ. ಅಷ್ಟೇ ಸಾಕು. ದುಡಿಯೋರು ನಾವು. ಕೂತು ತಿನ್ನೋರು ಅವರಾ?’ ಎಂದು ಹೆಸರು ಬಹಿರಂಗ ಪಡಿಸಲಿಚ್ಛಿಸದ ಚಾಲಕ ಕಂ ನಿರ್ವಾಹಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ಮುಷ್ಕರ ಬೆಂಬಲಿಸಿ ಮನೆಯಲ್ಲಿದ್ದೆ. ಡಿಪೋ ಮ್ಯಾನೇಜರ್‌ನಿಂದ ಹಿಡಿದು ಎಲ್ಲರೂ ಒಂದೇ ಸಮನೆ ಫೋನ್‌ ಮಾಡಿ ಕರೆಸಿಕೊಂಡರು. ನೋಟಿಸ್‌ ನೀಡುವುದಾಗಿ ಬೆದರಿಸಿದರು. ವಿಧಿಯಿಲ್ಲದೆ ಡಿಪೋಗೆ ಬಂದು ಬಸ್‌ ಹತ್ತಿದೆ. ಬಸ್‌ ನಿಲ್ದಾಣಗಳಲ್ಲಿ ನಮ್ಮವರೇ ನೋಡಿ ಬಯ್ಯುತ್ತಾರೆ. ಏನ್ಮಾಡೋದು, ಡ್ಯೂಟಿಗೆ ಬಂದ ತಪ್ಪಿಗೆ ಕೆಲಸ ಮಾಡುವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.