ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಉತ್ತನಹಳ್ಳಿ ಹಾಗೂ ಲಲಿತಾದ್ರಿಪುರ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಹಬ್ಬಿದ ಬೆಂಕಿಯಿಂದ ಸುಮಾರು 200 ಎಕರೆ ಅರಣ್ಯ ಸಂಪತ್ತು ನಷ್ಟವಾಗಿದೆ.
ಬೆಟ್ಟದ ತಪ್ಪಲಿನ ಭಾಗದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿಯು, ಜೋರಾಗಿ ಬೀಸುತ್ತಿದ್ದ ಗಾಳಿಯೊಂದಿಗೆ ಸೇರಿ ಶರವೇಗದಲ್ಲಿ ಬೆಟ್ಟದೆಲ್ಲೆಡೆ ವ್ಯಾಪಿಸಿತು. ಸುತ್ತಲಿನ ಪ್ರದೇಶದಲ್ಲಿ ಆವರಿಸಿದ ದಟ್ಟ ಹೊಗೆಯು ಜನರಲ್ಲಿ ಆತಂಕ ಸೃಷ್ಟಿಸಿತ್ತು.
ನಂಜನಗೂಡು, ಸರಸ್ವತಿಪುರಂ, ಶ್ರೀರಂಗಪಟ್ಟಣ, ಬನ್ನಿಮಂಟಪ ಹಾಗೂ ಹೆಬ್ಬಾಳದ ಅಗ್ನಿಶಾಮಕ ಠಾಣೆಯ 9 ವಾಹನಗಳಲ್ಲಿ ಧಾವಿಸಿದ ಸಿಬ್ಬಂದಿ ಸಂಜೆಯ ವೇಳೆಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕತ್ತಲಾದರೂ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿತ್ತು. ‘ಇದು ಧೂಮಪಾನಿಗಳ ಕೃತ್ಯ’ ಎಂದು ಮೂಲಗಳು ತಿಳಿಸಿವೆ.
‘ಒಣಹುಲ್ಲು ಹಾಗೂ ಕಳೆಗಳಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಿದ್ದು, ರಾತ್ರಿಯೂ ನಿಗಾ ವಹಿಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.