ADVERTISEMENT

ಅಮಾನಿಕೆರೆಗೆ ಇಳಿದು ನಾಲ್ಕು ಟನ್ ಮೀನು ಹಿಡಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 26 ಮೇ 2020, 16:34 IST
Last Updated 26 ಮೇ 2020, 16:34 IST
ಕಿಕ್ಕೇರಿ ಅಮಾನಿಕೆರೆಯಲ್ಲಿ ಮೀನು ಹಿಡಿಯಲು ದಂಡಿಯಾಗಿ ಗುಂಪು ಸೇರಿರುವ ಸಾರ್ವಜನಿಕರು
ಕಿಕ್ಕೇರಿ ಅಮಾನಿಕೆರೆಯಲ್ಲಿ ಮೀನು ಹಿಡಿಯಲು ದಂಡಿಯಾಗಿ ಗುಂಪು ಸೇರಿರುವ ಸಾರ್ವಜನಿಕರು   

ಕಿಕ್ಕೇರಿ (ಮಂಡ್ಯ ಜಿಲ್ಲೆ): ಕಿಕ್ಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಮಂಗಳವಾರ ಇಲ್ಲಿನ ಅಮಾನಿಕೆರೆಗೆ ಇಳಿದು ಅಂದಾಜು ನಾಲ್ಕು ಟನ್ ಮೀನು ಹಿಡಿದಿದ್ದಾರೆ.

ಗಂಗೇನಹಳ್ಳಿ, ತೆಂಗಿನಘಟ್ಟ, ಲಕ್ಷ್ಮೀಪುರ, ಕುಂದೂರು, ಸೊಳ್ಳೇಪುರ, ಕೋಡಿಮಾರನಹಳ್ಳಿ ಸೇರಿದಂತೆ ಕೆ.ಆರ್.ಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳ ಸುಮಾರು 400ಕ್ಕೂ ಹೆಚ್ಚು ಜನರು ಬಲೆ, ಕೂಳಿಗಳನ್ನು ತಂದು ಕೆರೆಗೆ ಇಳಿದಿದ್ದರು. ಸುತ್ತಮುತ್ತಲಿನ ಗ್ರಾಮಗಳಲ್ಲೇ ದೊಡ್ಡ ಕೆರೆಯಾಗಿರುವ ಅಮಾನಿಕೆರೆಯ ನೀರು ತಳ ಸೇರಿದ್ದು, ಜನರು ಮೀನು ಹಿಡಿಯಲು ಮುಗಿಬಿದ್ದಿದ್ದರು.

ವಿಷಯ ತಿಳಿದ ಸಾರ್ವಜನಿಕರು, ಮೀನು ಖರೀದಿಸಲೆಂದು ಕೆರೆಯ ಏರಿಯ ಮೇಲೆ ಜಮಾಯಿಸಿದ್ದರು.

ADVERTISEMENT

ಪರಸ್ಪರ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಇಲ್ಲದೇ ಗುಂಪಾಗಿ ಕೆರೆಗೆ ಇಳಿದಿದ್ದ ಹಾಗೂ ದಂಡೆಯ ಮೇಲಿದ್ದ ಜನರನ್ನು ಪೊಲೀಸರು ಚದುರಿಸಲು ಹರಸಹಾಸ ಪಟ್ಟರು. ಪೊಲೀಸರು ಬರುತ್ತಿರುವುದನ್ನು ಕಂಡೊಂಡನೆ ಒಂದೆಡೆಯಿಂದ ಮತ್ತೊಂದು ದಡಕ್ಕೆ ಸೇರಿ ಪೊಲೀಸರನ್ನು ಓಡಾಡಿಸಿ ಸುಸ್ತು ಮಾಡಿದರು. ಸಿಕ್ಕಿ ಬಿದ್ದ ಕೆಲವರು ತಾವು ಮೀನುಗಾರರು ನಮ್ಮನ್ನು ಬಿಟ್ಟುಬಿಡಿ ಎಂದು ಗೋಗರೆಯುತ್ತಿದ್ದರು. ಹಲವರು ಚೀಲದ ತುಂಬ ಮೀನು ಸಿಕ್ಕ ಖುಷಿಯಲ್ಲಿ ಮನೆ ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.