ADVERTISEMENT

ದುಬಾರಿಯಾಗುತ್ತಿರುವ ಹೂಗಳ ದರ

ವರಮಹಾಲಕ್ಷ್ಮೀ ಹಬ್ಬಕ್ಕೆ ಪೀಠಿಕೆ, ಸೇವಂತಿಕೆಗೆ ಬರ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:39 IST
Last Updated 5 ಆಗಸ್ಟ್ 2019, 19:39 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಮೈಸೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಪೀಠಿಕಾ ರೂಪದಲ್ಲಿ ಹೂಗಳ ದರ ನಗರದಲ್ಲಿ ಹೆಚ್ಚಾಗುತ್ತಿದೆ. ಇನ್ನೆರಡು ದಿನಗಳಲ್ಲಿ ದರವು ಮತ್ತಷ್ಟು ದುಬಾರಿಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

ಈಗಾಗಲೇ ಸೇವಂತಿಕೆ ಹೂವನ್ನು ಹುಡುಕಬೇಕಾದ ಪರಿಸ್ಥಿತಿ ಮಾರುಕಟ್ಟೆಯಲ್ಲಿದೆ. ಒಂದು ಮಾರಿಗೆ ₹ 100ರ ಗಡಿಯನ್ನು ಇದು ದಾಟಿದೆ. ಇಷ್ಟೊತ್ತಿಗೆ ಈ ಹೂವಿನ ಆವಕ ಹೆಚ್ಚಾಗಬೇಕಿತ್ತು. ಆದರೆ, ಮಳೆಯ ಕೊರತೆಯಿಂದ ಇಳುವರಿ ಬಂದಿಲ್ಲ.

ಇನ್ನುಳಿದಂತೆ ಕಳೆದ ವಾರ ಕನಕಾಂಬರದ ಸಗಟು ದರ ಕೆ.ಜಿಗೆ ₹ 600 ಇತ್ತು. ಈಗ ಇದು ₹ 1,600ಕ್ಕೆ ಹೆಚ್ಚಾಗಿದೆ. ₹ 180ರಲ್ಲಿದ್ದ ಮಲ್ಲಿಗೆ ₹ 320ಕ್ಕೆ, ₹ 120ರಲ್ಲಿದ್ದ ಮರಳೆ ₹ 200ಕ್ಕೆ, ₹ 20ರಲ್ಲಿದ್ದ ಚೆಂಡು ಹೂ ₹ 50ಕ್ಕೆ, ₹ 120ರಲ್ಲಿದ್ದ ಸಣ್ಣಗುಲಾಬಿ ₹ 200ಕ್ಕೆ ಏರಿಕೆ ಕಂಡಿದೆ.

ADVERTISEMENT

ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿಯೂ ದರ ಇದಕ್ಕಿಂತಲೂ ಹೆಚ್ಚಾಗಿದೆ. ಒಂದು ಮಾರಿಗೆ ₹ 80ರಿಂದ ₹ 100ರವರೆಗೆ ಸೇವಂತಿಕೆ, ₹ 50ರಿಂದ ₹ 60ರವರೆಗೆ ಮಲ್ಲಿಗೆ, ₹ 80ರಿಂದ ₹ 100ರವರೆಗೆ ಕನಕಾಂಬರದ ದರಗಳು ಇವೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವಿನ ದರಗಳು ಮತ್ತಷ್ಟು ಏರುವ ಸಂಭವ ಇದೆ ಎಂದು ವ್ಯಾಪಾರಿಗಳು ಅಂದಾಜು ಮಾಡಿದ್ದಾರೆ.

ಕಳೆದೊಂದು ವಾರದಿಂದ ಇಳಿಕೆಗತಿಯಲ್ಲಿದ್ದ ತರಕಾರಿಗಳ ಧಾರಣೆ ಈ ವಾರವೂ ಇದೇ ಗತಿಯಲ್ಲೇ ಮುಂದುವರಿದಿದೆ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಬೀನ್ಸ್‌ ದರ ₹ 35ರಿಂದ ₹ 30ಕ್ಕೆ ಕಡಿಮೆಯಾಗಿದೆ. ಕ್ಯಾರೆಟ್ ₹ 60ರಿಂದ ₹ 55ಕ್ಕೆ, ಹಸಿಮೆಣಸಿನಕಾಯಿ ₹ 20ರಿಂದ ₹ 15ಕ್ಕೆ ಇಳಿಕೆಯಾಗಿದೆ.

ಮೋಡ ಕವಿದ ವಾತಾವರಣಗಳಿಂದ ತರಕಾರಿಗಳ ಬೆಳೆಗಳಲ್ಲಿ ಸಮೃದ್ಧ ಇಳುವರಿ ಬಂದಿರುವುದರಿಂದ ಮಾರುಕಟ್ಟೆಗೆ ಹೆಚ್ಚಾಗಿ ತರಕಾರಿಗಳು ಆವಕವಾಗುತ್ತಿವೆ. ಆದರೆ, ಇದಕ್ಕೆ ಪೂರಕವಾಗಿ ಬೇಡಿಕೆ ಸೃಷ್ಟಿಯಾಗುತ್ತಿಲ್ಲ. ಕೇರಳ ಭಾಗದಲ್ಲೂ ಹೆಚ್ಚಿನ ಬೇಡಿಕೆ ಕಂಡು ಬರುತ್ತಿಲ್ಲ. ಇದರಿಂದ ಬೆಲೆಗಳು ಇಳಿಕೆಯಾಗುತ್ತಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಂಜನಗೂಡಿನ ರೈತ ಕೆಂಡಗಣ್ಣಸ್ವಾಮಿ ‘ಶ್ರಾವಣ ಮಾಸದಲ್ಲಿ ಮತ್ತೆ ಶುಭ ಸಮಾರಂಭಗಳು ನಡೆಯಲಿರುವುದರಿಂದ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಬಹುದು. ಬೆಲೆಯು ಏರಿಕೆಯಾಗಬಹುದು ಎಂಬ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 14; 14

ಬೀನ್ಸ್ ; 35; 30

ಕ್ಯಾರೆಟ್; 60; 55

ಎಲೆಕೋಸು; 18; 15

ದಪ್ಪಮೆಣಸಿನಕಾಯಿ; 39; 34

ಬದನೆ ; 08; 07

ನುಗ್ಗೆಕಾಯಿ; 30; 26

ಹಸಿಮೆಣಸಿನಕಾಯಿ; 20; 15

ಈರುಳ್ಳಿ; 18; 18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.