ಎಚ್.ಡಿ.ಕೋಟೆ: ಆಧುನಿಕ ಬದುಕಿನ ಯಾಂತ್ರಿಕ ಓಟದಲ್ಲಿ ಜಾನಪದ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಜನಪದ ಉತ್ಸವವನ್ನು ರಾಗಿ ಮತ್ತು ಭತ್ತದ ರಾಶಿಗೆ ಪೂಜೆ ಮಾಡಿ, ರಾಗಿಕಲ್ಲು ಬೀಸಿ, ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಸಂಸ್ಕೃತಿ ನಮ್ಮ ಹೆಮ್ಮೆ ಮತ್ತು ನಮ್ಮ ಬದುಕಿನ ಅವಿಭಾಜ್ಯ ಅಂಗ, ಅದನ್ನು ಬಿಂಬಿಸುವ ಉತ್ಸವ, ಆಟ, ಊಟ, ಹಾಡು-ಹಸೆಗಳ ಮೂಲಕ ನಮ್ಮ ಜಾನಪದ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಮರುಸೃಷ್ಟಿಸಿದ್ದಾರೆ ಎಂದರು.
₹4.5 ಕೋಟಿ ಸರ್ಕಾರಿ ಅನುದಾನದಿಂದ ಕಾಲೇಜಿಗೆ ಮೂಲ ಸೌಕರ್ಯವನ್ನು ಒದಗಿಸಲಾಗಿದೆ ಎಂದರು. ಈ ವರ್ಷದಿಂದ ಬಿ.ಸಿ.ಎ. ವಿಭಾಗ ಆರಂಭವಾಗುತ್ತಿದೆ. 200 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಸಿದರೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ತಾಲ್ಲೂಕಿನ ಪ್ರಗತಿಪರ ರೈತ ಮಲಾರ ಗ್ರಾಮದ ಮಲಾರ ಪುಟ್ಟಯ್ಯ ಮಾತನಾಡಿ ವಿದ್ಯಾರ್ಥಿಗಳು ನಮ್ಮ ಜಾನಪದ ಸಂಸ್ಕೃತಿಯನ್ನು ಉಳಿಸಬೇಕು. ಕೃಷಿಯಲ್ಲೂ ಹೆಚ್ಚಿನ ಉದ್ಯೋಗದ ಅವಕಾಶಗಳು ಇವೆ, ರೈತರ ಸ್ವಾವಲಂಬಿ ಜೀವನಕ್ಕೆ ನಾನೇ ಉದಾಹರಣೆ. ಅರ್ಜಿ ಹಾಕದೆ ದಸರಾ ಉದ್ಘಾಟನೆ, ರಾಜ್ಯೋತ್ಸವ ಪ್ರಶಸ್ತಿ, ರೈತ ರತ್ನ, ಸಹಕಾರ ರತ್ನ ಪ್ರಶಸ್ತಿ ಬಂದಿದೆ ಎಂದರು.
ಪ್ರಾಂಶುಪಾಲರಾದ ಪ್ರೊ. ಅರುಣ್ ಕುಮಾರ್, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಜಾನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಸತ್ತಿಗೆಗಳು ಮತ್ತು ಪಟ ಕುಣಿತ, ಕಂಸಾಳೆ. ಡೊಳ್ಳು ತಮಟೆ ವಾದ್ಯಗಳೊಂದಿಗೆ ಹಳ್ಳಿಕಾರ್ ಎತ್ತಿನ ಬಂಡಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ವೇದಿಕೆಗೆ ಆಗಮಿಸಿದರು.
ಕಚೇರಿ ಅಧೀಕ್ಷಕ ಬಾಲಾಜಿ, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು, ಎಸ್.ಜೆ.ಪ್ರೊ. ಬೋರಮ್ಮ ಎಸ್.ಅಂಗಡಿ. ಡಾ. ಮರಿದೇವಯ್ಯ, ಜೀವಿಕ ಬಸವರಾಜು. ಎಚ್.ಸಿ.ಮಂಜುನಾಥ್, ಪುರಸಭಾ ಸದಸ್ಯ ಎಂ.ಮಧು ಕುಮಾರ್, ಚೌಡಳ್ಳಿ ಜವರಯ್ಯ, ಸಿದ್ಧರಾಜು, ವೇಣುಗೋಪಾಲ್, ಮಲ್ಲೇಶ್, ಸಿದ್ದರಾಜು. ಡಾ. ಸೋಮಶೇಖರ್, ಪ್ರೊ. ಪ್ರಧಾನ ಗುರುದತ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ರಾಜಶೇಖರ್, ಪ್ರೊ. ಕೃ.ಪ. ಗಣೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.