ADVERTISEMENT

ನಮ್ಮ ಸಂಪ್ರದಾಯಗಳನ್ನು ಪಾಲಿಸುವುದು ಮೂಢನಂಬಿಕೆಯಲ್ಲ: ವಸಂತಕುಮಾರ್‌

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 12:39 IST
Last Updated 25 ಆಗಸ್ಟ್ 2022, 12:39 IST

ಮೈಸೂರು: ‘ನಮ್ಮ ಸಂಪ್ರದಾಯಗಳನ್ನು ಪಾಲಿಸುವುದು ಮೂಢನಂಬಿಕೆಯಲ್ಲ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್‌ ಪ್ರತಿಪಾದಿಸಿದರು.

ಎಬಿವಿಪಿಯ ಅಂಗಸಂಸ್ಥೆಯಾದ ‘ಆರ್ಟ್‌ ಮ್ಯಾಟರ್ಸ್‌’ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರದಿಂದ ಆ.28ರವರೆಗೆ ಹಮ್ಮಿಕೊಂಡಿರುವ ರಾಜ್ಯಮಟ್ಟದ ‘ಕಾವಿಕಲೆ ಕಾರ್ಯಾಗಾರ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಾಶ್ಚಾತ್ಯ‌ ಚಿಂತನೆಗೆ ಮಾರು ಹೋಗುತ್ತಿರುವವರು ಭಾರತೀಯ ಚಿಂತನೆಯನ್ನು ಮರೆಯುತ್ತಿದ್ದಾರೆ. ನಮ್ಮ ಸಂಪ್ರದಾಯಗಳೆಂದರೆ ಮೂಢನಂಬಿಕೆ ಎಂದು ಭಾವಿಸಿದ್ದಾರೆ. ನಮ್ಮ ಮನೆಯ ಸಂಸ್ಕೃತಿಗಳನ್ನು ಕೀಳು ಎಂದು‌ ನಮ್ಮ ತಲೆಗೆ ತುಂಬಿದ್ದಾರೆ. ಇದರಿಂದ ನಮ್ಮ ನಿಧಿಯನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಬೇರು ಕಳೆದುಕೊಂಡರೆ ಬದುಕಲಾಗದು:‘ಬೇರು ಕಳೆದುಕೊಂಡ ಮರ ಹೆಚ್ಚು ಕಾಲ ಬದುಕುಳಿಯುವುದಿಲ್ಲ. ಹಾಗೆಯೇ, ಬೇರುಗಳನ್ನು ಕಳೆದುಕೊಳ್ಳುವ ಮನುಷ್ಯ ಹಾಗೂ ಸಂಸ್ಕೃತಿ ದೀರ್ಘ ಕಾಲದವರೆಗೆ ಬದುಕುವುದಿಲ್ಲ’ ಎಂದರು.

‘ಭಾರತೀಯ ಕಲೆ, ಸಂಸ್ಕೃತಿ, ವಿಜ್ಞಾನ, ಸಾಹಿತ್ಯದ ಮೂಲ‌ ಅಧ್ಯಾತ್ಮ. ಸಾಹಿತಿಗಳದ್ದು ಶಬ್ದ ಚಿತ್ರ.‌ ಕಲಾವಿದರದ್ದು‌‌ ಚಿತ್ರ ಶಬ್ದ. ಪಾಶ್ಚಾತ್ಯರು‌ ಹೊರಗಿನ ಸತ್ಯ ಹುಡುಕಿದರೆ, ಭಾರತೀಯರು ಒಳಗಿನ ಸತ್ಯ‌ ಹುಡುಕುವವರು’ ಎಂದು ಹೇಳಿದರು.

‘ಕಲಾವಿದರೆಲ್ಲರೂ ಸೃಷ್ಟಿಕರ್ತರೆ. ಕಲೆ ಅರ್ಥ ಮಾಡಿಕೊಳ್ಳಲು ‌ಸಹೃದಯರು ಬೇಕು. ಎಲ್ಲರಿಗೂ ಅದು ಅರ್ಥವಾಗುವುದಿಲ್ಲ. ಕಲೆಯು ಆದಿ ಅಂತ್ಯವಿಲ್ಲದೆ ಚಲನೆಯೂ, ಮನೋಲೋಕದ ಸೃಷ್ಟಿಯೂ ಹೌದು. ಅದು ಅನ್ನಲೋಕದಿಂದಲೇ ಉತ್ಪಾದನೆ ಆಗುತ್ತದೆ’ ಎಂದು ವ್ಯಾಖ್ಯಾನಿಸಿದರು.

ಕಾರ್ಯಾಗಾರ ಉದ್ಘಾಟಿಸಿದ ಕಲಾವಿದ ಎಸ್.ಎಂ.ಜಂಬುಕೇಶ್ವರ ಮಾತನಾಡಿ, ‘ಕಾವಿ ಕಲೆಯು ಸಾಂಪ್ರದಾಯಿಕವಾದ ಕಲೆ. 12 ಮತ್ತು 13ನೇ ಶತಮಾನದಲ್ಲಿ ಹುಟ್ಟಿ ನಂತರ ಹರಡಿತು. ಇತ್ತೀಚಿಗೆ ಆ ಕಲೆ ನಶಸಿ‌ ಹೋಗುತ್ತಿರುವುದನ್ನು ಕಾಣುತ್ತೇವೆ. ಅದನ್ನು ಉಳಿಸಲು ಆರ್ಟ್ ಮ್ಯಾಟರ್ಸ್ ಮುಂದಾಗಿರುವುದು ಶ್ಲಾಘನೀಯ’ ಎಂದು ಹೇಳಿದರು.

ಕಲೆ, ಧರ್ಮ ಪೂರಕ:‘ಕಲಾ‌ ಪ್ರಕಾರಗಳಲ್ಲಿ ‌ಬುಡಕಟ್ಟು‌ ಹಾಗೂ ಜಾನಪದ‌ ಚಿತ್ರಕಲೆಯ ನಂತರದ ರೂಪವೇ‌‌ ಕಾವಿಕಲೆ. ಧರ್ಮ ಬೆಳೆಯಲು ಕಲೆ ಹಾಗೂ ಕಲೆ ಬೆಳೆಯಲು‌ ಧರ್ಮ ಪೂರಕವಾಗಿದೆ. ಪರಸ್ಪರ ಉತ್ತುಂಗಕ್ಕೆ ತೆಗೆದುಕೊಂಡು ‌ಹೋಗುತ್ತವೆ’ ಎಂದು ಶ್ರೀಕಲಾನಿಕೇತನ ಕಲಾ ಶಾಲೆಯ ಪ್ರಾಚಾರ್ಯ ಕೆ.ಸಿ.ಮಹದೇವಶೆಟ್ಟಿ ತಿಳಿಸಿದರು.

‘ವಿಶಿಷ್ಟವಾದ ಕಲಾ ಪ್ರಕಾರಗಳನ್ನು ಈಗಿನ ಪೀಳಿಗೆಗೆ ಕಲಿಸಿ, ಉಳಿಸಿ-ಬೆಳೆಸಬೇಕು. ಮೂಲ ಬಣ್ಣ ಹಾಗೂ ಮೂಲ‌ ಕಲಾಪ್ರಕಾರವನ್ನು ಕಡೆಗಣಿಸಬಾರದು. ಸಂಸ್ಕೃತಿ ಗಟ್ಟಿಗೊಳಿಸುವ ಬೇರುಗಳಾದ‌ ನಮ್ಮ ಕಲೆಗಳನ್ನು ಉಳಿಸಿಕೊಳ್ಳಬೇಕು’ ಎಂದರು.

ಕಾರ್ಯಾಗಾರದ ಸಂಚಾಲಕ ವಿಠ್ಠಲರೆಡ್ಡಿ ಚುಳಕಿ ಮಾತನಾಡಿದರು.

ಆರ್ಟ್‌ ಮ್ಯಾಟರ್ಸ್‌ನ ಜಿಲ್ಲಾ ಸಂಚಾಲಕ ಶಿವು ಇದ್ದರು. ಆರ್ಟ್ ಮ್ಯಾಟರ್ಸ್‌ನ ಕರ್ನಾಟಕ ಪ್ರಾಂತ ಸಂಯೋಜಕ ಚಂದ್ರಶೇಖರ್ ಸಿ. ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.