ADVERTISEMENT

ರಾಸಾಯನಿಕ ಬಳಕೆಯಿಂದ ಆಹಾರ ವಿಷಮಯ: ಹೊನ್ನೂರು ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:09 IST
Last Updated 16 ಜೂನ್ 2025, 14:09 IST
ನಂಜನಗೂಡು ತಾಲ್ಲೂಕಿನ ಕಾರ್ಯಸಿದ್ದೇಶ್ವರ ಬೆಟ್ಟದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್‌ ಮಾತನಾಡಿದರು
ನಂಜನಗೂಡು ತಾಲ್ಲೂಕಿನ ಕಾರ್ಯಸಿದ್ದೇಶ್ವರ ಬೆಟ್ಟದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್‌ ಮಾತನಾಡಿದರು   

ನಂಜನಗೂಡು: ‘ಹೆಚ್ಚಿನ ರಾಸಾಯನಿಕಗಳ ಬಳಕೆಯಿಂದಾಗಿ ಆಹಾರ ಧಾನ್ಯಗಳು ವಿಷಮಯವಾಗುತ್ತಿದ್ದು, ರೈತರಾಗಿ ವಿಷದ ಬೆಳೆ ಬೆಳೆಯುವ ಮೂಲಕ ನಮ್ಮ ಕುಟುಂಬಕ್ಕೆ ವಿಷ ಉಣಿಸುತ್ತಿದ್ದೇವೆ’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಎಚ್ಚರಿಸಿದರು.

ತಾಲ್ಲೂಕಿನ ಕಾರ್ಯಸಿದ್ದೇಶ್ವರ ಬೆಟ್ಟದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೂತನ ಘಟಕ ಉದ್ಘಾಟಿಸಿ ಮಾತನಾಡಿದರು.

‘ನಾವು ಬಳಸುವ ಗೊಬ್ಬರ, ಬಿತ್ತನೆ ಬೀಜ, ಬೆಳೆಗಳಿಗೆ ಹಾಕುವ ಔಷಧ ಎಲ್ಲವು ವಿಷಮಯವಾಗಿವೆ. ಇದರಿಂದಾಗಿ ಆಹಾರ ಪದಾರ್ಥಗಳು ಕಲುಷಿತಗೊಂಡು ಜನರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. 10 ಜನರಲ್ಲಿ ಒಬ್ಬರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಸರ್ವೆ ಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ಋತುಮತಿಯಾಗುತ್ತಿದ್ದಾರೆ. ದಂಪತಿಗೆ ಸರಿಯಾದ ಸಮಯದಲ್ಲಿ ‌ಮಕ್ಕಳಾಗದೆ ಬಂಜೆತನದಿಂದ ಬಳಲುತ್ತಿದ್ದಾರೆ. ರೈತರು ಮುಂದಿನ ತಲೆಮಾರನ್ನು ಆರೋಗ್ಯಕರ ಸಮಾಜವನ್ನಾಗಿ ರೂಪಿಸಲು ಈಗಿನಿಂದಲೇ ಎಚ್ಚೆತ್ತುಕೊಂಡು ಸಾವಯವ ಬೇಸಾಯ ಪದ್ಧತಿ ಅನುಸರಿಸಿ ರಾಸಾಯನಿಕ ಮುಕ್ತ ಕೃಷಿಯಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ರೈತರು ನಮ್ಮ ಹಕ್ಕು, ಮೂಲಸೌಕರ್ಯಗಳನ್ನು ಪಡೆದುಕೊಳ್ಳಲು ರಾಜಕಾರಣಿಗಳು, ಅಧಿಕಾರಿಗಳ ಎದುರು ಕೈಕಟ್ಟಿ ನಿಲ್ಲಬೇಕಿಲ್ಲ. ಪೊರಕೆ ಚಳವಳಿ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರೈತರು ಪ್ರಜ್ಞಾವಂತರಾಗಿ ಮತವನ್ನು ಹಣಕ್ಕಾಗಿ ಮಾರಿಕೊಳ್ಳದೆ ಉತ್ತಮ ರಾಜಕಾರಣಿಗಳನ್ನು ಆರಿಸಬೇಕು’ ಎಂದು ಕಿವಿಮಾತು ಹೇಳಿದರು.

ಸಂಘದ ರಾಜ್ಯ ಘಟಕದ ನೂತನ ಅಧ್ಯಕ್ಷ ಹಾಡ್ಯರವಿ, ‘ಕಬ್ಬು ಬೆಳೆಗಾರರ ಸಂಘದ ಹಿರಿಯ ಹೋರಾಟಗಾರರ ಭ್ರಷ್ಟಾಚಾರ ಮತ್ತು ಮೋಸದಿಂದಾಗಿ ಬೇಸತ್ತು ರೈತರ ಹಿತ ಕಾಪಾಡುವ ಸಲುವಾಗಿ ಹೊಸ ಸಂಘ ಸ್ಥಾ‍ಪಿಸಿ‌ದ್ದೇವೆ. ನಮ್ಮ ಸಂಘಟನೆಯು ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಪ್ರಾಮಾಣಿಕವಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಿದೆ’ ಎಂದರು.

ದೇವಿರಮ್ಮನಹಳ್ಳಿ ನಂದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಮ್ಯರಾಜ್, ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಯ್ಯ, ತಾಲ್ಲೂಕು ಘಟಕದ ಅಅಧ್ಯಕ್ಷ ಅಂಬಳೆ ಮಹದೇವಸ್ವಾಮಿ, ಮುದ್ದಳ್ಳಿ ಚಿಕ್ಕಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಕಸುವಿನಹಳ್ಳಿ ಮಂಜೇಶ್, ಹುಂಡಿ ಮಹೇಶ್, ದೇವರಮ್ಮನ ಹಳ್ಳಿಕುಮಾರ್, ಎಚಗುಂಡ್ಲಾ ಮಹೇಶ್, ದೊರೆಸ್ವಾಮಿ, ಅಂಡುವಿನ ಹಳ್ಳಿ ಮರಿಸ್ವಾಮಿ, ಮಲ್ಲೂರು ವರ್ಷ, ಅರಳಿಕಟ್ಟೆ ಕುಮಾರ್, ಪ್ರವೀಣ್ ಮಾಲೂರು ಕುಮಾರ್, ರವಿಕುಮಾರ್, ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.