ಮೈಸೂರು: ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಮಂಗಳವಾರ ಮೈಸೂರು ಲೋಕಾಯುಕ್ತ ಎಸ್.ಪಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾದಿಂದ ವಿಜಯನಗರದಲ್ಲಿ 14 ನಿವೇಶನಗಳನ್ನು ನಿಯಮ ಮೀರಿ ಹಂಚಿಕೆ ಮಾಡಿದ ಆರೋಪ ಅವರ ಮೇಲಿದೆ. ಈ ಸಂಬಂಧ ವಿಚಾರಣೆಗೆ ಬರುವಂತೆ ಪ್ರಕರಣದ ತನಿಖಾಧಿಕಾರಿ ಟಿ.ಜೆ. ಉದೇಶ್ ನೋಟಿಸ್ ನೀಡಿದ್ದರು.
ಬೆಳಿಗ್ಗೆ 10.30ಕ್ಕೆ ಲೋಕಾಯುಕ್ತ ಕಚೇರಿಗೆ ಬಂದ ಅವರು ಸಂಜೆವರೆಗೂ ವಿಚಾರಣೆ ಎದುರಿಸಿದರು. ಬದಲಿ ನಿವೇಶನಗಳ ಹಂಚಿಕೆಯ ನಿರ್ಣಯ, ವಿಜಯನಗರದಲ್ಲೇ ನಿವೇಶನಗಳನ್ನು ನೀಡಿದ್ದರ ಕುರಿತು ಅಧಿಕಾರಿಗಳ ತಂಡವು ಪ್ರಶ್ನಿಸಿ ಮಾಹಿತಿ ಪಡೆಯಿತು.
ಈ ಸಂದರ್ಭ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ನಟೇಶ್ ‘ ನಾವೊಂದು ಕಾಯ್ದೆಯ ಪ್ರಕಾರ ನಿವೇಶನ ಕೊಟ್ಟಿದ್ದು ಸರಿ ಎನ್ನುತ್ತೇವೆ. ಇನ್ನೊಂದು ಕಾಯ್ದೆಯಲ್ಲಿ ಬೇರೆಯವರು ಬೇರೊಂದು ರೀತಿ ಅರ್ಥೈಸುತ್ತಾರೆ. ವಿಚಾರಣೆ ವರದಿ ಬಂದರೆ ಯಾವುದು ಸತ್ಯ ಎಂದು ಗೊತ್ತಾಗುತ್ತದೆ’ ಎಂದರು.
ಕಪ‍್ಪು ಬಟ್ಟೆ ಪ್ರದರ್ಶನ
ಲೋಕಾಯುಕ್ತ ವಿಚಾರಣೆಗೆ ಹಾಜರಾಗಿರುವ ಡಿ.ಬಿ. ನಟೇಶ್‌ಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ಹಾಗೂ ಮುಡಾದ ನಿವೃತ್ತ ಅಧಿಕಾರಿ ಪಿ.ಎಸ್. ನಟರಾಜು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಗಂಗರಾಜು,
‘ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಸಂಬಂಧ ನಿರ್ದೇಶನ ಕೋರಿ
ನಟೇಶ್ 2021ರ ಜುಲೈ 14ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರಲ್ಲಿ
ಪಾರ್ವತಿ ಅವರು ಈ ಜಮೀನನ್ನು ಮಲ್ಲಿಕಾರ್ಜುನ ಸ್ವಾಮಿ ಅವರಿಂದ
ಖರೀದಿ ಮಾಡಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದರು. ಸರ್ಕಾರದಿಂದ ನಿರ್ದೇಶನ ಬರುವ ಮುನ್ನವೇ ಬದಲಿ ನಿವೇಶನ ಹಂಚಿಕೆ ಮಾಡಿದ್ದರು.
ನಟೇಶ್ ಮುಡಾ ಹಗರಣದ ರೂವಾರಿ. ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.