ADVERTISEMENT

ಹಾಲು ಉತ್ಪಾದಕರಿಗೆ ಉಚಿತ ವಿಮಾ ಸೌಲಭ್ಯ: ಮೈಮೂಲ್ ಅಧ್ಯಕ್ಷ ಆರ್.ಚೆಲುವರಾಜು

​ಪ್ರಜಾವಾಣಿ ವಾರ್ತೆ
Published 10 ಮೇ 2025, 13:03 IST
Last Updated 10 ಮೇ 2025, 13:03 IST
ತಿ.ನರಸೀಪುರ ತಾಲ್ಲೂಕು ಬಿಲಿಗೆರೆಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ಮಿಸುತ್ತಿರುವ ಹಾಲು ಶೀತಲೀಕರಣ ಘಟಕದ ಕಾಮಗಾರಿಗೆ ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು ಚಾಲನೆ ನೀಡಿದರು
ತಿ.ನರಸೀಪುರ ತಾಲ್ಲೂಕು ಬಿಲಿಗೆರೆಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ಮಿಸುತ್ತಿರುವ ಹಾಲು ಶೀತಲೀಕರಣ ಘಟಕದ ಕಾಮಗಾರಿಗೆ ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು ಚಾಲನೆ ನೀಡಿದರು   

ತಿ.ನರಸೀಪುರ: ‘ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ 65 ಸಾವಿರ ಮಂದಿ ಹೈನುಗಾರರಿಗೆ ಉಚಿತ ವಿಮೆ ಸೌಲಭ್ಯ ಒದಗಿಸಲಾಗುವುದು’ ಎಂದು ಮೈಮೂಲ್ ಅಧ್ಯಕ್ಷ ಆರ್.ಚೆಲುವರಾಜು ತಿಳಿಸಿದರು.

ತಾಲ್ಲೂಕಿನ‌ ಬಿಲಿಗೆರೆಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಿಎಂಸಿ ಕೇಂದ್ರ(ಶೀತಲೀಕರಣ ಘಟಕ) ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಈ ಹಿಂದೆ ರೈತರಿಗೆ ಶೇ 50 ರ ಸಬ್ಸಿಡಿಯಲ್ಲಿ ವಿಮೆ ಸೌಲಭ್ಯ ಒದಗಿಸಲಾಗುತ್ತಿತ್ತು. ಇದರಲ್ಲಿ ₹550   ವಿಮೆ ಮೊತ್ತದ ಪೈಕಿ ₹275  ರೈತರು ಪಾವತಿಸಿದರೆ, ಉಳಿಕೆ ₹275  ಒಕ್ಕೂಟ ನೀಡುತ್ತಿತ್ತು. ಆದರೆ 60 ಸಾವಿರ ಉತ್ಪಾದಕರಲ್ಲಿ 10 ಸಾವಿರ ಮಂದಿ ಮಾತ್ರವೇ ವಿಮೆ ಸೌಲಭ್ಯ ಪಡೆಯುತ್ತಿರುವುದನ್ನು ಗಮನಿಸಿ ಒಕ್ಕೂಟದ ನಿರ್ದೇಶಕರ ಸಲಹೆ ಮೇರೆಗೆ ಉಚಿತ ವಿಮೆ ಮಾಡಿಕೊಡಲಾಗುವುದು ಎಂದು ಹೇಳಿದರು.

ADVERTISEMENT

ರಾಸುಗಳಿಗೆ ವಿಮೆ ಮಾಡಿಸಲು ರೈತರಿಂದ ಶೇ 25 ಹಣ ಪಡೆದು ಶೇ 75  ಹಣವನ್ನು ಒಕ್ಕೂಟ ಭರಿಸುತ್ತಿದೆ. ಇತರೆ ಖರ್ಚುಗಳಿಗಾಗಿ ರೈತರಿಂದ ₹250  ಪಡೆದು ಈಗ ₹50 ಮಾತ್ರವೇ ಪಡೆಯಲು ನಿರ್ಧರಿಸಲಾಗಿದೆ. ಗ್ರಾಮೀಣ ಯುವಕರು ಉದ್ಯೋಗ ಹುಡುಕಿ ನಗರದೆಡೆಗೆ ಹೋಗುವುದನ್ನು ತಡಗಟ್ಟಲು ಹೈನುಗಾರಿಕೆ ಉದ್ಯಮ ಹೆಚ್ಚಿನ ಅಭಿವೃದ್ಧಿ ಆಗಬೇಕಿದೆ ಎಂದರು.

ಮೈಸೂರು ಹಾಲು ಒಕ್ಕೂಟ ಎರಡು ತಿಂಗಳ ಅವಧಿಯಲ್ಲಿ ಹೈನುಗಾರಿಕೆ ಬೇಕಾದ ಮ್ಯಾಟ್, ಜಾಬ್ ಕಟರ್ ಗಳನ್ನು ಶೇ 50 ರ ರಿಯಾಯ್ತಿ ದರದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಬಿ.ಮಹದೇವಸ್ವಾಮಿ ಮಾತನಾಡಿ, ‘ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ದಿನಕ್ಕೆ 1 ಸಾವಿರ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ಬಿಎಂಸಿ ಕೇಂದ್ರ ಮಾಡಲು ಸಹಕರಿಸುವಂತೆ ಮೈಮುಲ್ ಅಧ್ಯಕ್ಷರನ್ನು ಮನವಿ ಮಾಡಿದ್ದು, ಚೆಲುವರಾಜು  ಸ್ಪಂದಿಸಿ ಭೂಮಿ ಪೂಜೆ ನೆರವೇರಿಸಿದ್ದಾರೆ.  ಕಾಮಗಾರಿಯನ್ನು ಗ್ರಾಮದ ಒಕ್ಕೂಟದಿಂದಲೇ ಆರಂಭಿಸುತ್ತೇವೆ.  ಒಕ್ಕೂಟದ ಅನುದಾನದೊಂದಿಗೆ ಕೇಂದ್ರವನ್ನು ಪೂರ್ಣಗೊಳಿಸುತ್ತೇವೆ’ ಎಂದು ತಿಳಿಸಿದರು.

ಮೈಮುಲ್ ಮಾಜಿ ಅಧ್ಯಕ್ಷರಾದ ಓಂಪ್ರಕಾಶ್, ಕೆ.ಜಿ. ಮಹೇಶ್, ಕೆ.ಉಮಾ ಶಂಕರ್, ಹಿರಿಯ ನಿರ್ದೇಶಕರಾದ ಸದಾನಂದ, ಲೀಲಾಂಬಿಕೆ ಮಹೇಶ್, ಲೀಲಾ ನಾಗರಾಜು,ಮುಖಂಡರಾದ ಎಂ.ರಮೇಶ್, ಡೇರಿ ಉಪಾಧ್ಯಕ್ಷ ಏಳು ಮಲೆ ಮಂಜು, ನಿರ್ದೇಶಕರಾದ ಶಂಕರ್, ಪಾಪ ನಾಯಕ, ಸಿದ್ದರಾಜು, ಚಂದ್ರಮ್ಮ ಮಹೇಶ್, ಸಹಕಾರ ಸಂಘದ ನಿರ್ದೇಶಕಿ ಗೌರಮ್ಮಣಿ ಮಹದೇವಸ್ವಾಮಿ, ಮೈಮುಲ್ ವ್ಯವಸ್ಥಾಪಕ ಸುರೇಶ್ ನಾಯ್ಕ, ಬಿಎಂಸಿ ವ್ಯವಸ್ಥಾಪಕ ಸಂತೋಷ್, ಹಿರಿಯ ಮಾರ್ಗ ವಿಸ್ತರಣಾಧಿಕಾರಿ ಆರ್. ಪ್ರಮೋದ್, ಶೃತಿ, ಡೇರಿ ಕಾರ್ಯದರ್ಶಿಗಳಾದ ಪುರುಷೋತ್ತಮ್, ಅಂದಾನಿ ಗೌಡ, ಗಿರೀಶ್, ರಾಜೀವ್, ನಾಗರಾಜ್(ತಾತ), ಶಿವರುದ್ರಗೌಡ, ವೀರಶೈವ ಮಹಾಸಭಾ ನಿರ್ದೇಶಕ ಮಹಾಲಿಂಗಸ್ವಾಮಿ, ಸಿದ್ದರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.