ADVERTISEMENT

ಮೈಸೂರು: ರಾಜು ಅನಂತಸ್ವಾಮಿ ನೆನಪಿನಲ್ಲಿ ‘ಗಾನಲಹರಿ’

​ಪ್ರಜಾವಾಣಿ ವಾರ್ತೆ
Published 17 ಮೇ 2025, 16:31 IST
Last Updated 17 ಮೇ 2025, 16:31 IST
   

ಮೈಸೂರು: ಇಲ್ಲಿನ ಕುವೆಂಪುನಗರದ ವೀಣೆಶೇಷಣ್ಣ ಭವನದಲ್ಲಿ ಶನಿವಾರ ನಡೆದ ‘ಗಾನಲಹರಿ’ ಕಾರ್ಯಕ್ರಮವು, ಹೆಸರಾಂತ ಗಾಯಕ ರಾಜು ಅನಂತಸ್ವಾಮಿ ಅವರ ನೆನಪನ್ನು ಹೊತ್ತುತಂದಿತು.

ನಿತಿನ್ಸ್‌ ನಾದಾಮೃತ ಸಂಗೀತ ಶಾಲೆಯ 11ನೇ ವಾರ್ಷಿಕೋತ್ಸವದಲ್ಲಿ 6ನೇ ರಾಜು ಗಾನಲಹರಿಯೂ ನಡೆಯಿತು. ಗಾಯಕಿ ಶುಭಾ ರಾಘವೇಂದ್ರ ಅವರಿಗೆ ‘ಅನಂತಸ್ವಾಮಿ ಗಾನರತ್ನ’, ಪಂಡಿತ ಭೀಮಾಶಂಕರ್‌ ಬಿದನೂರು ಅವರಿಗೆ ‘ರಾಜು ನಾದರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಮಾತನಾಡಿ, ‘ಮೈಸೂರು ಅನಂತಸ್ವಾಮಿ ಹಾಗೂ ರಾಜು ಅನಂತಸ್ವಾಮಿ ಅವರ ಪರಂಪರೆಯನ್ನು ನಿತಿನ್‌ ರಾಜಾರಾಂ ಶಾಸ್ತ್ರಿ ಮುಂದುವರಿಸುತ್ತಿದ್ದಾರೆ. ರಾಜು ಅನಂತಸ್ವಾಮಿ ಬಗ್ಗೆ ಮಾತನಾಡುವಾಗ ಭಾವುಕನಾಗುತ್ತೇನೆ. ಆತ ಸಂಗೀತದಲ್ಲಿ ಶಿಸ್ತು ಹೊಂದಿದ್ದ. ಆದರೆ, ಜೀವನದಲ್ಲಿ ಶಿಸ್ತು ಇರಲಿಲ್ಲ. ಅದೊಂದಿದ್ದಿದ್ದರೆ ಆತ ಬಹುಕಾಲ ನಮ್ಮ ನಡುವೆ ಇರುತ್ತಿದ್ದ’ ಎಂದು ನೆನೆದರು.

ADVERTISEMENT

ಉದ್ಘಾಟಿಸಿದ ಧ್ವನಿ ಫೌಂಡೇಷನ್ಸ್‌ ಸಂಸ್ಥಾಪಕಿ ಶ್ವೇತಾ ಮಡಪ್ಪಾಡಿ, ಗಾಯಕಿ ಶ್ರೀರಕ್ಷಾ ಪ್ರಿಯರಾಮ್‌, ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ವಿಶೇಷ ಆಹ್ವಾನಿತರಾಗಿದ್ದರು. ಗಾಯಕರಾದ ಬಿ.ವಿ. ಶ್ರೀನಿವಾಸ್‌, ನಾಗಚಂದ್ರಿಕಾ ಭಟ್‌, ಸಿ.ಎಂ. ನರಸಿಂಹಮೂರ್ತಿ, ನಿತಿನ್‌ ರಾಜಾರಾಂ ಶಾಸ್ತ್ರಿ ಪಾಲ್ಗೊಂಡಿದ್ದರು.

ಮೈಸೂರು ಅನಂತಸ್ವಾಮಿ ಹಾಗೂ ರಾಜು ಅನಂತಸ್ವಾಮಿ ಅವರ ಸಂಯೋಜನೆಯ ಗೀತೆಗಳನ್ನು ವಿದ್ಯಾಲಯದ ವಿದ್ಯಾರ್ಥಿಗಳು, ಅತಿಥಿ ಗಾಯಕರು ಹಾಡಿದರು. ಪುರುಷೋತ್ತಮ ಕಿರಗಸೂರು- ಕೀ ಬೋರ್ಡ್, ಪ್ರದೀಪ್‌ ಕಿಣ್ಗಾಲ್‌- ಗಿಟಾರ್‌, ಭೀಮಾಶಂಕರ ಬಿದನೂರು- ತಬಲ, ವಿನಯ್‌  ರಂಗಧೋಲಳ್- ರಿದಂ ಪ್ಯಾಡ್‌ ಸಾಥ್‌ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.