ADVERTISEMENT

ಮೈಸೂರು: ಗಾಂಧಿ ಭವನ ಅಭಿವೃದ್ಧಿಗೆ ಯತ್ನ

60ನೇ ವರ್ಷಾಚರಣೆಯಲ್ಲಿ ಕೇಂದ್ರ; ₹3 ಕೋಟಿ ಅನುದಾನ ಪ್ರಸ್ತಾವಕ್ಕೆ ಸಿದ್ಧತೆ

ಎಚ್‌.ಕೆ. ಸುಧೀರ್‌ಕುಮಾರ್
Published 30 ಜನವರಿ 2025, 7:15 IST
Last Updated 30 ಜನವರಿ 2025, 7:15 IST
ಮೈಸೂರು ವಿಶ್ವದ್ಯಾಲಯದ ಗಾಂಧಿ ಭವನದಲ್ಲಿರುವ ಸಭಾ ಕೊಠಡಿಯಲ್ಲಿಯೇ ಗ್ರಂಥಗಳನ್ನು ಜೋಡಿಸಿಟ್ಟಿರುವುದು
ಮೈಸೂರು ವಿಶ್ವದ್ಯಾಲಯದ ಗಾಂಧಿ ಭವನದಲ್ಲಿರುವ ಸಭಾ ಕೊಠಡಿಯಲ್ಲಿಯೇ ಗ್ರಂಥಗಳನ್ನು ಜೋಡಿಸಿಟ್ಟಿರುವುದು   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ಗಾಂಧಿ ಭವನದ (ಗಾಂಧಿ ಅಧ್ಯಯನ ಕೇಂದ್ರ) ಅಭಿವೃದ್ಧಿಗೆ ಸಿದ್ಧತೆ ನಡೆದಿದೆ. ನಿರಂತರ ಕಾರ್ಯಕ್ರಮಗಳ ಆಯೋಜನೆ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ₹3 ಕೋಟಿ ಒದಗಿಸುವಂತೆ ವಿಶ್ವವಿದ್ಯಾಲಯದ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತಯಾರಿ ನಡೆದಿದೆ.

ಗಾಂಧೀಜಿ ಅವರ ಚಿಂತನೆ ಮತ್ತು ಸಂದೇಶಗಳನ್ನು ಎಲ್ಲೆಡೆ ಪ‍ಸರಿಸುವ ಉದ್ದೇಶದಿಂದ ಆರಂಭವಾಗಿರುವ ಭವನವು ಜ. 31ಕ್ಕೆ 60 ವರ್ಷ ಪೂರೈಸಲಿದೆ. 

ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕಾಂಗ್ರೆಸ್‌ ಅಧಿವೇಶನಕ್ಕೆ ತೆರಳಿದ್ದ ಕುವೆಂಪು, ಗಾಂಧೀಜಿಯಿಂದ ಪ್ರಭಾವಿತರಾಗಿದ್ದರು. ಅವರು ವಿವಿಯ ಕುಲಪತಿಯಾಗಿದ್ದಾಗ ಗಾಂಧಿ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಕುಲಪತಿಗಳಾಗಿದ್ದ ಪ್ರೊ.ಎನ್‌.ಎ.ನಿಕ್ಕಂ, ಪ್ರೊ.ಕೆ.ಎಲ್‌.ಶ್ರೀಮಾಲಿ ಸಹಕರಿಸಿದ್ದರು. ಮುಖ್ಯಮಂತ್ರಿ ಬಿ.ಡಿ.ಜತ್ತಿ ಶಿಲಾನ್ಯಾಸ ಮಾಡಿದ್ದು, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಭವನ ಉದ್ಘಾಟನೆ ನೆರವೇರಿಸಿದ್ದರು.

ADVERTISEMENT

₹2 ಕೋಟಿ ದತ್ತಿ ನಿಧಿಗೆ ಬೇಡಿಕೆ: ‘ಗಾಂಧಿ ಅಧ್ಯಯನ ಕೇಂದ್ರವು ಗಾಂಧೀಜಿಯ ವಿಚಾರಧಾರೆಗಳ ಪ್ರಸಾರಕ್ಕೆಂದು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ವಿಚಾರಸಂಕಿರಣ, ಉಪನ್ಯಾಸ, ವಿವಿಧ ಸ್ಪರ್ಧೆ, ಜನಪ್ರತಿನಿಧಿಗಳಿಗೆ ಕಾರ್ಯಾಗಾರ, ಜನಸಾಮಾನ್ಯರಿಗಾಗಿ ನಾಟಕ, ಚಲನಚಿತ್ರಗಳ ಪ್ರದರ್ಶನ ಹೀಗೆ ವರ್ಷಪೂರ್ತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಚಟುವಟಿಕೆಗಳಿಗೆ ವಿಶ್ವದ್ಯಾಲಯವು ವರ್ಷಕ್ಕೆ ₹50 ಸಾವಿರ ಅನುದಾನ ಒದಗಿಸುತ್ತಿದ್ದು, ಇದು ಸಾಲುವುದಿಲ್ಲ. ₹2 ಕೋಟಿ ದತ್ತಿ ನಿಧಿ ಇರಿಸಿದರೆ ಅದರ ಆದಾಯದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಬಹುದು’ ಎಂದು ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರವು 1 ವರ್ಷದ ಡಿಪ್ಲೊಮಾ ಇನ್‌ ‘ಗಾಂಧಿಯನ್‌ ಸ್ಟಡೀಸ್‌’ ಕೋರ್ಸ್‌, ‘ಶಾಂತಿ ಮತ್ತು ಸಂಘರ್ಷ ಮಾರ್ಗೋಪಾಯ ವಿಷಯದಲ್ಲಿ ಎಂ.ಎ ಕೋರ್ಸ್‌ ಹಾಗೂ ಅಂತರಶಿಸ್ತೀಯ ಪಿಎಚ್‌ಡಿ ಕೋರ್ಸ್‌ ನಡೆಸುತ್ತಿದೆ. ಈವರೆಗೆ 63 ಮಂದಿಗೆ ಪಿಎಚ್‌ಡಿ ಪ್ರದಾನ ಮಾಡಿದೆ. ಇಲ್ಲಿನ ಡಿಪ್ಲೊಮಾ ಕೋರ್ಸ್‌ ವಿದ್ಯಾರ್ಥಿಗಳಿಗೆ ಸರ್ಕಾರವು ಬಸ್‌ ಪಾಸ್‌ ಒದಗಿಸಿದರೆ, ದಾಖಲಾತಿ ಹೆಚ್ಚಳವಾಗುತ್ತದೆ’ ಎಂದು ಕೋರುತ್ತಾರೆ ಅವರು.

ಉನ್ನತ ಶಿಕ್ಷಣ ಇಲಾಖೆ ಸಭೆಯಲ್ಲಿ ಶೀಘ್ರವೇ ಅನುದಾನ ಪ್ರಸ್ತಾವದ ಬಗ್ಗೆ ಚರ್ಚೆ ನಡೆಯಲಿದೆ. ಬಳಿಕ ವಿಶ್ವವಿದ್ಯಾಲಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ.
–ಪ್ರೊ.ಎಸ್.ನರೇಂದ್ರಕುಮಾರ್‌, ನಿರ್ದೇಶಕ ಗಾಂಧಿ ಅಧ್ಯಯನ ಕೇಂದ್ರ

‘ಸುಸಜ್ಜಿತ ಗ್ರಂಥಾಲಯ ಅಗತ್ಯ’

‘ಭವನದಲ್ಲಿ ನಿರ್ದೇಶಕರ ಕೊಠಡಿಗೆ ಹೊಂದಿಕೊಂಡ ಸಭಾ ಕೊಠಡಿಯಲ್ಲಿಯೇ ಗಾಂಧೀಜಿ ಹಾಗೂ ಅಂತರಶಿಸ್ತೀಯ ವಿಷಯಗಳ 5000ಕ್ಕೂ ಹೆಚ್ಚು ಗ್ರಂಥಗಳನ್ನು ಇರಿಸಲಾಗಿದೆ. ಸದ್ಯ ಇದೇ ಗ್ರಂಥಾಲಯವಾಗಿದ್ದು ಓದುವವರಿಗೆ ಉತ್ತಮ ಸ್ಥಳದ ಅಗತ್ಯವಿದೆ’ ಎಂದು ಪ್ರೊ.ಎಸ್.ನರೇಂದ್ರಕುಮಾರ್‌ ತಿಳಿಸಿದರು.

‘ಪ್ರತಿ ವರ್ಷ ಪುಸ್ತಕ ಖರೀದಿಗೆಂದು ₹10 ಸಾವಿರ ಅನುದಾನ ಸಿಗುತ್ತದೆ. ಹೊಸ ಪುಸ್ತಕಗಳಿಗೆ ಜಾಗ ಹೊಂದಿಸಲು ಕಷ್ಟವಾಗುತ್ತಿದೆ. ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ₹1 ಕೋಟಿ ಒದಗಿಸುವಂತೆ ಕೋರಲಿದ್ದೇವೆ. ಸಬರಮತಿ ಆಶ್ರಮ ಮಾದರಿ ಬಳಿ ಜಾಗವಿದೆ. ಪ್ರಸಾರಾಂಗದ ಮೂಲಕ 1975ರಲ್ಲಿ ಡಿ.ಜೆ.ತೆಂಡೂಲ್ಕರ್‌ ಅವರ ‘ಮಹಾತ್ಮ’ ಶೀರ್ಷಿಕೆಯ ಹತ್ತು ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿತ್ತು. ಈ ಎಲ್ಲಾ ಸಂಪುಟಗಳು ಮಾರಾಟವಾಗಿದ್ದು ಮರುಮುದ್ರಣಕ್ಕೆ ಬೇಡಿಕೆ ಹೆಚ್ಚಿದೆ. ಅನುದಾನ ಸಿಕ್ಕರೆ ಸಹಕಾರಿಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.