ADVERTISEMENT

ಸಿದ್ದರಾಮಯ್ಯ ‘ಕೈ’ ಬಲಪಡಿಸಲು ಮನವಿ

ಹುಣಸೂರಿಗೆ ಪ್ರಚಾರಕ್ಕೆ ಬಂದರೆ ಸುಮಲತಾಗೆ ಕಪ್ಪು ಬಾವುಟ; ಗೋ ಬ್ಯಾಕ್ ಘೋಷಣೆ–ಮಾಜಿ ಶಾಸಕ ಕೆ.ಸಿ.ಪುಟ್ಟಸಿದ್ದಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 13:30 IST
Last Updated 18 ನವೆಂಬರ್ 2019, 13:30 IST

ಮೈಸೂರು: ‘ಉಪಚುನಾವಣೆಯಲ್ಲಿ ಅಹಿಂದ ಮತದಾರರು ಮತ್ತೊಮ್ಮೆ ಸಿದ್ದರಾಮಯ್ಯ ‘ಕೈ’ ಬಲಪಡಿಸಬೇಕಿದೆ’ ಎಂದು ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷ, ಮಾಜಿ ಶಾಸಕ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮನವಿ ಮಾಡಿದರು.

‘ದೇವರಾಜ ಅರಸು ನಂತರ ಸ್ಥಿರ ಸರ್ಕಾರ ಕೊಟ್ಟವರು, ಅಹಿಂದ ವರ್ಗಕ್ಕೆ ಸೌಲಭ್ಯ ಒದಗಿಸಿದವರು ಸಿದ್ದರಾಮಯ್ಯ. ಇದೀಗ ಎದುರಾಗಿರುವ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲಿಸದೆ, ಭವಿಷ್ಯಕ್ಕಾಗಿ ಸಿದ್ದರಾಮಯ್ಯ ಅವರನ್ನೇ ಬೆಂಬಲಿಸಬೇಕು’ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

‘ಸ್ವಾಭಿಮಾನದ ಹೆಸರಿನಲ್ಲಿ ಗೆದ್ದ ಸಂಸದೆ ಸುಮಲತಾ, ಹುಣಸೂರು, ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಪರ ಅವರು ಪ್ರಚಾರಕ್ಕೆಂದು ಹುಣಸೂರಿಗೆ ಬಂದರೆ, ಕಪ್ಪು ಬಾವುಟ ಪ್ರದರ್ಶಿಸುವ ಜತೆಯಲ್ಲೇ ಗೋ ಬ್ಯಾಕ್ ಸುಮಲತಾ ಘೋಷಣೆಗಳನ್ನು ಮೊಳಗಿಸಬೇಕಾಗುತ್ತದೆ’ ಎಂದು ಪುಟ್ಟಸಿದ್ಧಶೆಟ್ಟಿ ಎಚ್ಚರಿಕೆ ನೀಡಿದರು.

ADVERTISEMENT

ಬಿಎಸ್‌ವೈ ವಿರುದ್ಧ ಸಂತೋಷ್ ಷಡ್ಯಂತ್ರ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸ್ವಪಕ್ಷೀಯರೇ ಆದ ಬಿ.ಎಲ್.ಸಂತೋಷ್ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಉಪಚುನಾವಣಾ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಿಎಂಗೆ ಎರಡನೇ ಸ್ಥಾನ ನೀಡಲಾಗಿದೆ’ ಎಂದು ಮಾಜಿ ಶಾಸಕರು ದೂರಿದರು.

‘ಬಿಜೆಪಿ ಸರ್ಕಾರದ ರಿಮೋಟ್ ಕಂಟ್ರೋಲ್ ಆರ್‌ಎಸ್‌ಎಸ್‌ ಕೈನಲ್ಲಿದೆ. ಇದರಿಂದಾಗಿಯೇ ಅಹಿಂದ ವರ್ಗದ ವಿರೋಧಿ ನೀತಿ ಹೊರಹೊಮ್ಮುತ್ತಿವೆ’ ಎಂದು ಅವರು ಆರೋಪಿಸಿದರು.

‘ಪ್ರಾಥಮಿಕ ಶಾಲೆಯ ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿರುವುದು ಸರಿಯಲ್ಲ. ಅಂಬೇಡ್ಕರ್ ಬಗ್ಗೆ ಮಕ್ಕಳಲ್ಲಿ ತಪ್ಪು ಕಲ್ಪನೆ ಬಿತ್ತಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಇದೆಲ್ಲವನ್ನೂ ಬಿಜೆಪಿ ಸರ್ಕಾರ ನಿಲ್ಲಿಸಬೇಕು’ ಎಂದು ಇದೇ ಸಂದರ್ಭ ಒತ್ತಾಯಿಸಿದರು.

ಕಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಬೀರಪ್ಪಶೆಟ್ಟಿ, ಪ್ರಸನ್ನ, ಅರವಿಂದ ಶರ್ಮ, ಕುಮಾರಶೆಟ್ಟಿ, ಡಾ.ಮಧು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.