ADVERTISEMENT

‘ಮಾದರಿ ಮೈಸೂರಿನ ಪರಂಪರೆ ಮುಂದುವರೆಯಲಿ’

ಸುವರ್ಣ ಮೈಸೂರಿಗಾಗಿ ಶ್ರಮಿಸೋಣ; ರಾಜವಂಶಸ್ಥ ಕೃಷ್ಣದತ್ತ ಚಾಮರಾಜ ಒಡೆಯರ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 9:54 IST
Last Updated 30 ಅಕ್ಟೋಬರ್ 2019, 9:54 IST
ಸ್ಟೇಟ್‌ ಬ್ಯಾಂಕ್ ಆಫ್ ಮೈಸೂರ್ ಪೆನ್ಷನರ್ಸ್‌ ಕಮ್ಯುನ್‌ನ ರಜತ ಮಹೋತ್ಸವವನ್ನು ಬುಧವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಸಂಘಟನೆಯ ಪದಾಧಿಕಾರಿಗಳು ಇದ್ದಾರೆ
ಸ್ಟೇಟ್‌ ಬ್ಯಾಂಕ್ ಆಫ್ ಮೈಸೂರ್ ಪೆನ್ಷನರ್ಸ್‌ ಕಮ್ಯುನ್‌ನ ರಜತ ಮಹೋತ್ಸವವನ್ನು ಬುಧವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಸಂಘಟನೆಯ ಪದಾಧಿಕಾರಿಗಳು ಇದ್ದಾರೆ   

ಮೈಸೂರು: ‘ಮೈಸೂರು ಸಂಸ್ಥಾನದ ಮಹಾರಾಜರು ರೂಪಿಸಿದ ‘ಮಾದರಿ ಮೈಸೂರು’ ನಿರ್ಮಾಣದ ಪರಂಪರೆಯನ್ನು ನಾವು ಮುಂದುವರೆಸಬೇಕಿದೆ’ ಎಂದು ರಾಜವಂಶಸ್ಥ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಸ್ಟೇಟ್‌ ಬ್ಯಾಂಕ್ ಆಫ್ ಮೈಸೂರ್ ಪೆನ್ಷನರ್ಸ್‌ ಕಮ್ಯುನ್‌ನ ರಜತ ಮಹೋತ್ಸವವನ್ನು ಬುಧವಾರ ಉದ್ಘಾಟಿಸಿದ ಯದುವೀರ್, ‘ಸುವರ್ಣ ಮೈಸೂರು ನಿರ್ಮಾಣದ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ಹಿರಿಯರು ಸ್ಥಾಪಿಸಿದಂತೆಯೇ ನಾವೂ ಸಹ ಶತಮಾನಗಳ ಕಾಲ ಜನ ಸಾಮಾನ್ಯರಿಗೆ ಉಪಯೋಗವಾಗುವ ಸಂಸ್ಥೆಗಳನ್ನು ಸ್ಥಾಪಿಸಿ, ಬೆಳೆಸಬೇಕಿದೆ’ ಎಂದು ಹೇಳಿದರು.

‘ನಮ್ಮ ಪೀಳಿಗೆಯೂ ಸುವರ್ಣ ಮೈಸೂರು ನೋಡಬೇಕು. ಇದಕ್ಕಾಗಿ ಅಹೋರಾತ್ರಿ ಶ್ರಮಿಸಬೇಕು. ಕೆಲಸ ಮಾಡುವ ಸಮಯವಿದು. ಹಿರಿಯರ ಸಾಧನೆಗಳನ್ನು ನೋಡಿ, ಕಲಿತು ಮುಂದುವರೆಸಬೇಕು. ಒಳ್ಳೆಯ ಕೆಲಸಗಳನ್ನು ಜನರು ಸದಾ ಸ್ಮರಿಸುತ್ತಾರೆ ಎಂಬುದಕ್ಕೆ ಮೈಸೂರು ಸಂಸ್ಥಾನದ ಮಹಾರಾಜರು ಸಾಕ್ಷಿಯಾಗಿದ್ದಾರೆ’ ಎಂದರು.

ADVERTISEMENT

‘ಮೈಸೂರಿನ ಹೆಸರು ಹಲವು ಬಾರಿ ಬದಲಾಗಿದೆ. ಕರ್ನಾಟಕ ಎಂದು ಬದಲಾದರೂ; ಮೈಸೂರು ಎಂಬ ಶಬ್ದ ಕೇಳಿದೊಡನೆ ಜನರ ಹೃದಯದಲ್ಲಿ ಪ್ರೀತಿಯ ಭಾವನೆ ಅರಳಲಿದೆ. ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಇದು ನಮ್ಮ ಮುಂದಿನ ಪೀಳಿಗೆಯಲ್ಲೂ ಮುಂದುವರೆಯಬೇಕು. ಅವರು ಸಹ ಮೈಸೂರಿನ ವೈಭವವನ್ನು, ಆದರ್ಶವನ್ನು ತಮ್ಮೊಳಗೆ ಅಳವಡಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಇದೀಗ ನಮ್ಮ ಹೆಗಲಿಗೇರಿದೆ’ ಎಂದು ಹೇಳಿದರು.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಎಂ.ಅರುಣಗಿರಿ ಮಾತನಾಡಿ, ‘ಶತಮಾನದ ಐತಿಹ್ಯವುಳ್ಳ ಸ್ಟೇಟ್‌ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಬ್ಯಾಂಕ್‌ನೊಳಗೆ ವಿಲೀನವಾಗಿದ್ದು ಐತಿಹಾಸಿಕ ಪ್ರಕ್ರಿಯೆ’ ಎಂದು ಸ್ಮರಿಸಿಕೊಂಡರು.

‘ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಚಿಂತನೆಯ ಫಲದಿಂದ ₹ 20 ಲಕ್ಷ ಬಂಡವಾಳದಿಂದ 1903ರಲ್ಲಿ ಆರಂಭಗೊಂಡ ಎಸ್‌ಬಿಎಂ, ವಿಲೀನದ ಸಂದರ್ಭ ಸಹಸ್ರ, ಸಹಸ್ರ ಸಂಖ್ಯೆಯ ಶಾಖೆ, ಸಹಸ್ರ, ಸಹಸ್ರ ಕೋಟಿ ಮೊತ್ತದ ವಹಿವಾಟು ಹೊಂದಿತ್ತು’ ಎಂದು ಹೇಳಿದರು.

ಸ್ಟೇಟ್‌ ಬ್ಯಾಂಕ್ ಆಫ್ ಮೈಸೂರ್ ಪೆನ್ಷನರ್ಸ್‌ ಕಮ್ಯುನ್‌ನ ಅಧ್ಯಕ್ಷ ಕಾ.ನಾ.ಶ್ರೀನಿವಾಸರಾವ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.