ADVERTISEMENT

ಜಂಟಿ ಸಹಭಾಗಿತ್ವದ ಯೋಜನೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ

ಒಪ್ಪಂದಕ್ಕೆ ಮುಂದೆ ಬಂದ 700 ಎಕರೆ ಭೂಮಾಲೀಕರು– ‘ಮುಡಾ’ ಅಧ್ಯಕ್ಷ ಎಚ್.ವಿ.ರಾಜೀವ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 12:39 IST
Last Updated 12 ನವೆಂಬರ್ 2020, 12:39 IST

ಮೈಸೂರು: ಭೂಮಾಲೀಕರು ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ‘ಮುಡಾ’ ಅಧ್ಯಕ್ಷ ಎಚ್.ವಿ.ರಾಜೀವ್ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ 700 ಎಕರೆ ಭೂಮಾಲೀಕರು ಒಪ್ಪಂದಕ್ಕೆ ಮುಂದೆ ಬಂದಿದ್ದಾರೆ. ಸುಮಾರು 4 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸುವ ಚಿಂತನೆ ನಡೆದಿದೆ ಎಂದರು.

ಈಚೆಗೆ ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಹಿಂದೆ ಅಧಿಸೂಚನೆ ಹೊರಡಿಸಿ ನಂತರ ಭೂಮಾಲೀಕರೊಂದಿಗೆ ಸಭೆ ನಡೆಸಲಾಗುತ್ತಿತ್ತು. ಆದರೆ, ಈಗ ಮೊದಲೇ ಭೂಮಾಲೀಕರೊಂದಿಗೆ ಚರ್ಚಿಸಿ, ಒಪ್ಪಂದ ಮಾಡಿಕೊಂಡು ಬಡಾವಣೆ ರಚಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಏನಿದು ಯೋಜನೆ?

ಜಂಟಿ ಸಹಭಾಗಿತ್ವದ ಯೋಜನೆಯಲ್ಲಿ ಒಂದು ಎಕರೆಗೆ ₹ 10 ಲಕ್ಷ ಹಣವನ್ನು ಮುಂಗಡವಾಗಿ ಭೂಮಾಲೀಕರಿಗೆ ನೀಡಲಾಗುತ್ತದೆ. ಅಭಿವೃದ್ಧಿಯಾದ ನಿವೇಶನದಲ್ಲಿ ಶೇ 50ರಷ್ಟು ಅಂದರೆ ಎಕರೆಗೆ 30x40 ಅಳತೆಯ 9 ನಿವೇಶನಗಳನ್ನು ನೀಡಲಾಗುತ್ತದೆ. ಮುಂಗಡ ನೀಡಿದ ಹಣವನ್ನು ನಿವೇಶನ ನೀಡುವಾಗ ಹೊಂದಿಸಿಕೊಳ್ಳಲಾಗುತ್ತದೆ. ಬಡಾವಣೆ ನಿರ್ಮಾಣಕ್ಕೆ 18 ತಿಂಗಳಷ್ಟು ಕಾಲಮಿತಿ ನಿಗದಿಪಡಿಸಲಾಗಿದೆ.

ನಿವೇಶನ ಪಡೆದ ಮೇಲೆ ಭೂಮಾಲೀಕರು ಅದನ್ನು ಪ್ರಾಧಿಕಾರಕ್ಕೆ ಅಥವಾ ಬೇರೆ ಯಾರಿಗಾದರೂ ಮಾರಾಟ ಮಾಡಬಹುದು ಅಥವಾ ತಮ್ಮ ಬಳಿಯೇ ಉಳಿಸಿಕೊಳ್ಳಲೂ ಬಹುದು. ಮುಂದೆ ದರ ಹೆಚ್ಚಾದಾಗ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸ್ವಾತಂತ್ರ್ಯ ಭೂಮಾಲೀಕರಿಗೆ ಇರುತ್ತದೆ.‌ ಆದರೆ, ಮೂಲೆ ಅಥವಾ ವಾಣಿಜ್ಯ ನಿವೇಶನಗಳನ್ನು ನೀಡಲಾಗುವುದಿಲ್ಲ.

ನಿವೇಶನ ಹಂಚಿಕೆ ಹೇಗೆ?

ಇದುವರೆಗೂ 85 ಸಾವಿರ ಮಂದಿ ನಿವೇಶನ ಬೇಕು ಎಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸಾಕಷ್ಟು ಬಾರಿ ಅರ್ಜಿ ಹಾಕಿದವರೂ ಇದ್ದಾರೆ. ಮೊದಲ ಆದ್ಯತೆ ನಿವೇಶನ ರಹಿತರೇ ಆಗಿದ್ದಾರೆ ಎಂದು ರಾಜೀವ್ ತಿಳಿಸಿದರು.‌

ಈ ಹಿಂದೆ ಅರ್ಜಿ ಹಾಕಿದ್ದವರ ಕುಟುಂಬದ ಸದಸ್ಯರು ಈಗಾಗಲೇ ನಿವೇಶನ ಖರೀದಿಸಿರಬಹುದು. ಈಗ ಅವರಿಗೆ ನಿವೇಶನ ಖರೀದಿಸುವ ಆಸಕ್ತಿ ಇಲ್ಲದಿರಬಹುದು. ಏನೆ ಆದರೂ, ನಿವೇಶನ ರಹಿತರಿಗೆ ಮೊದಲ ಆದ್ಯತೆ. ಹಾಗಾಗಿ, ಎಲ್ಲ ಅರ್ಜಿಗಳನ್ನು ಅವರ ಆಧಾರ್ ಹಾಗೂ ಪಾನ್‌ಸಂಖ್ಯೆ ಜತೆ ಜೋಡಿಸಲಾಗುವುದು. ಇಲ್ಲಿ ಯಾವುದೇ ಅಕ್ರಮಕ್ಕೂ ಅವಕಾಶ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹಳೆಯ ಬಡಾವಣೆಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ

ಈಗಾಗಲೇ ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆಗಳಲ್ಲಿರುವ ಮೂಲಸೌಕರ್ಯ ಸಮಸ್ಯೆಗಳ ಕುರಿತು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು. ಆದಷ್ಟು ಶೀಘ್ರ ಇವುಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.