ADVERTISEMENT

ಮಾವು ಮೇಳದಲ್ಲಿ ಭರ್ಜರಿ ವ್ಯಾಪಾರ

ಕೆಲವು ತಳಿಗಳ ಬೆಲೆಯಲ್ಲಿ ಹೆಚ್ಚಳ; ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ನಷ್ಟ: ವ್ಯಾಪಾರಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:52 IST
Last Updated 25 ಮೇ 2019, 19:52 IST
ಮಾವು ಮೇಳದಲ್ಲಿ ಮಾವು ಖರೀದಿಸಿದ ಗ್ರಾಹಕರು
ಮಾವು ಮೇಳದಲ್ಲಿ ಮಾವು ಖರೀದಿಸಿದ ಗ್ರಾಹಕರು   

ಮೈಸೂರು: ತೋಟಗಾರಿಕೆ ಇಲಾಖೆಯು ನಗರದ ಕರ್ಜನ್ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಮಾವು ಮತ್ತು ಹಲಸು ಮೇಳಕ್ಕೆ ಎರಡನೇ ದಿನವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶನಿವಾರ ಎಲ್ಲ ಮಳಿಗೆಗಳಲ್ಲೂ ಭರ್ಜರಿ ವ್ಯಾಪಾರ ಕಂಡುಬಂತು. ದೊಡ್ಡ ದೊಡ್ಡ ಚೀಲಗಳೊಂದಿಗೆ ಬಂದಿದ್ದ ಗ್ರಾಹಕರು ಕೆ.ಜಿ.ಗಟ್ಟಲೆ ಹಣ್ಣುಗಳನ್ನು ಖರೀದಿಸಿ ಹೋಗುತ್ತಿದ್ದ ದೃಶ್ಯ ಇಡೀ ದಿನ ಕಂಡುಬಂತು.

ಶುಕ್ರವಾರಕ್ಕೆ ಹೋಲಿಸಿದರೆ, ಶನಿವಾರ ಕೆಲವೊಂದು ತಳಿಗಳ ಬೆಲೆಯಲ್ಲಿ ಅಲ್ಪ ಹೆಚ್ಚಳ ಕಂಡುಬಂತು. ತೋಟಗಾರಿಕೆ ಇಲಾಖೆ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಿದರೆ ನಷ್ಟ ಉಂಟಾಗುತ್ತದೆ ಎಂದು ವ್ಯಾಪಾರಿಗಳು ಹೇಳಿದರು.

ADVERTISEMENT

‘ಈ ಬಾರಿ ಫಸಲು ಕಡಿಮೆ ಬಂದಿದೆ. ಇಲಾಖೆ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಿದರೆ ನಷ್ಟ ಉಂಟಾಗುತ್ತದೆ. ಆದ್ದರಿಂದ ಅಧಿಕಾರಿಗಳ ಜತೆ ಮಾತನಾಡಿ ಬೆಲೆಯನ್ನು ಅಲ್ಪ ಹೆಚ್ಚಿಸಿದ್ದೇವೆ. ಆದರೂ ಹಾಪ್‌ಕಾಮ್ಸ್‌ ಮತ್ತು ಎಪಿಎಂಸಿ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ’ ಎಂದು ವ್ಯಾಪಾರಿಗಳು ತಿಳಿಸಿದರು.

ಶುಕ್ರವಾರ ಬಾದಾಮಿ, ಅಲ್ಫಾನ್ಸೊ ತಳಿಗಳನ್ನು ಕೆ.ಜಿಗೆ ₹ 55ಕ್ಕೆ ಮಾರಾಟ ಮಾಡಲಾಗಿತ್ತು. ಆದರೆ ಶನಿವಾರ ಹೆಚ್ಚಿನ ಮಳಿಗೆಗಳಲ್ಲಿ ಅಲ್ಫಾನ್ಸೊಗೆ ಕೆ.ಜಿ.ಗೆ ₹ 70 ಹಾಗೂ ಬಾದಾಮಿಗೆ ಕೆ.ಜಿ.ಗೆ ₹ 60 ಇತ್ತು.

‘ಮೊದಲ ದಿನ ಸುಮಾರು ನಾಲ್ಕು ಕ್ವಿಂಟಲ್‌ ಹಣ್ಣುಗಳನ್ನು ಮಾರಾಟ ಮಾಡಿದ್ದೇನೆ. ಅಲ್ಫಾನ್ಸೊ ಮತ್ತು ಬಾದಾಮಿ ತಳಿಗಳನ್ನು ಹೆಚ್ಚು ಮಂದಿ ಖರೀದಿಸಿದ್ದಾರೆ’ ಎಂದು ಚನ್ನಪಟ್ಟಣದಿಂದ ಬಂದಿರುವ ವ್ಯಾಪಾರಿ ಮುನಿಸ್ವಾಮಿ ತಿಳಿಸಿದರು.

‘ಹೊಸ ತಳಿಗಳ ಹಣ್ಣುಗಳನ್ನು ಪರಿಚಯಿಸುತ್ತಿದ್ದೇನೆ. ಶುಕ್ರವಾರ ಎರಡು ಕ್ವಿಂಟಲ್‌ ಮಾರಾಟವಾಗಿದೆ. ಶನಿವಾರ ಹೆಚ್ಚಿನ ವ್ಯಾಪಾರ ನಡೆದಿದ್ದು, ಭಾನುವಾರ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ’ ಎಂದು ಜಟ್ಟಿಹುಂಡಿಯ ದೀಪಕ್‌ ಹೇಳಿದರು.

‘ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇವೆ. ಆದರೂ ಕೆಲವು ಗ್ರಾಹಕರು ಬೆಲೆ ಹೆಚ್ಚಾಯಿತು ಎನ್ನುವರು. ಸೂಪರ್‌ ಮಾರ್ಕೆಟ್‌ ಮತ್ತು ಮಾಲ್‌ಗಳಲ್ಲಿ ಕೆ.ಜಿ.ಗೆ ₹ 80 ರಿಂದ ₹ 100 ಕೊಟ್ಟು ಖರೀದಿಸುವವರಿಗೆ ಇಲ್ಲಿನ ಬೆಲೆ ಹೆಚ್ಚಾಯಿತೇ’ ಎಂದು ತಿ.ನರಸೀಪುರ ತಾಲ್ಲೂಕು ಕೆಂಪನಪುರದ ಲಕ್ಷ್ಮಿ ಅವರು ಪ್ರಶ್ನಿಸುತ್ತಾರೆ.

ಧೈರ್ಯದಿಂದ ಕೊಳ್ಳಬಹುದು: ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ದೊರೆಯುತ್ತವೆ ಎಂಬ ಕಾರಣದಿಂದ ಗ್ರಾಹಕರು ಮಾವು ಮತ್ತು ಹಲಸು ಮೇಳಕ್ಕೆ ಲಗ್ಗೆ ಇಡುತ್ತಿದ್ದಾರೆ.

‘ರಸ್ತೆ ಬದಿ ಮತ್ತು ನಗರದ ಬಹುತೇಕ ಕಡೆಗಳಲ್ಲಿ ಮಾರಾಟಕ್ಕಿಟ್ಟಿರುವ ಮಾವಿನ ಹಣ್ಣುಗಳು ನೋಡಲು ಆಕರ್ಷವಾಗಿ ಕಾಣುತ್ತವೆ. ಆದರೆ ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಮಾಗಿಸಿರುವುದರಿಂದ ತಿನ್ನಲು ಭಯವಾಗುತ್ತದೆ. ಇಲ್ಲಿ ಅಂತಹ ಭಯವಿಲ್ಲದೆ ಹಣ್ಣು ಕೊಳ್ಳಬಹುದು’ ಎಂದು ಕುವೆಂಪುನಗರದ ನಿವಾಸಿ ಪರಿಮಳಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.