ADVERTISEMENT

ಸರ್ಕಾರಿ ಐವಿಎಫ್‌ ಕೇಂದ್ರ ಶೀಘ್ರ

ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಸ್ಥಾಪನೆ; ಟೆಂಡರ್‌ ಪ್ರಕ್ರಿಯೆ ಆರಂಭ

ಆರ್.ಜಿತೇಂದ್ರ
Published 31 ಅಕ್ಟೋಬರ್ 2025, 6:29 IST
Last Updated 31 ಅಕ್ಟೋಬರ್ 2025, 6:29 IST
ಡಾ. ಕೆ.ಆರ್. ದಾಕ್ಷಾಯಿಣಿ
ಡಾ. ಕೆ.ಆರ್. ದಾಕ್ಷಾಯಿಣಿ   

ಮೈಸೂರು: ಬಂಜೆತನದ ಸಮಸ್ಯೆ ಎದುರಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ನೂರಾರು ಜನರು ಮಕ್ಕಳನ್ನು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿನ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಐವಿಎಫ್‌ ಕೇಂದ್ರ ತೆರೆಯುತ್ತಿದೆ.

ನಗರದ ಚೆಲುವಾಂಬ ಆಸ್ಪತ್ರೆಯ ಆವರಣದಲ್ಲಿ ಇದಕ್ಕಾಗಿ ಸ್ಥಳ ಗುರುತಿಸಿದ್ದು, ಈಗಾಗಲೇ ಟೆಂಡರ್‌ ಮೊದಲಾದ ಪ್ರಕ್ರಿಯೆಗಳು ಪೂರ್ಣಗೊಂಡು ಸಿವಿಲ್ ಕಾಮಗಾರಿಗಳು ಆರಂಭವಾಗಿವೆ. ಯಂತ್ರೋಪಕರಣಗಳ ಖರೀದಿಗೂ ಚಾಲನೆ ದೊರೆತಿದೆ. ಅಂದುಕೊಂಡಂತೆ ಆದಲ್ಲಿ ಸದ್ಯದಲ್ಲೇ ಈ ಕೇಂದ್ರವು ಸಾರ್ವಜನಿಕರ ಸೇವೆಗೆ ಲಭ್ಯ ಆಗಲಿದೆ.

2023ರ ಬಜೆಟ್‌ನಲ್ಲಿ ಸರ್ಕಾರವು ಮೈಸೂರು ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ ಸರ್ಕಾರಿ ಐವಿಎಫ್‌ ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿತ್ತು. ಅಂತೆಯೇ ಮೈಸೂರಿನಲ್ಲಿ ಮೆಡಿಕಲ್‌ ಕಾಲೇಜು ಆವರಣದಲ್ಲಿ ಕೇಂದ್ರ ಆರಂಭಿಸಲಾಗುತ್ತಿದೆ. ಒಟ್ಟು ₹2 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಸದ್ಯ ಎಂಎಂಸಿ ನಿಧಿಯಲ್ಲೇ ಇದನ್ನು ಭರಿಸಲಾಗುತ್ತಿದೆ. ನಂತರದಲ್ಲಿ ಸರ್ಕಾರದಿಂದ ಅನುದಾನ ಸಿಗುವ ನಿರೀಕ್ಷೆ ಇದೆ.

ADVERTISEMENT

ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಬೇಕಾದ ಸಲಕರಣೆಗಳು, ಪ್ರಯೋಗಾಲಯ, ತಜ್ಞ ವೈದ್ಯರ ಕೊಠಡಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕೇಂದ್ರವು ಹೊಂದಲಿದೆ. ಜೊತೆಗೆ ಅಗತ್ಯವಿರುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಯೋಜಿಸಲಾಗಿದೆ. 

ಏನು ಅನುಕೂಲ?

‘ಈಚಿನ ದಿನಗಳಲ್ಲಿ ಜನರಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಲೇ ಇದೆ. ಅಂತಹವರಿಗೆ ವೈಜ್ಞಾನಿಕ ರೀತಿಯ ಪರೀಕ್ಷೆ ಹಾಗೂ ಮಕ್ಕಳನ್ನು ಪಡೆಯುವ ಚಿಕಿತ್ಸೆಯ ಸೇವೆಗಳು ಈ ಕೇಂದ್ರದಲ್ಲಿ ಲಭ್ಯ ಆಗಲಿವೆ’ ಎನ್ನುತ್ತಾರೆ ಎಂಎಂಸಿ ಡೀನ್ ಡಾ. ಕೆ.ಆರ್. ದಾಕ್ಷಾಯಿಣಿ. ಮೈಸೂರಿನ ವಿವಿಧೆಡೆ ಈಗಾಗಲೇ ಹತ್ತು ಹಲವು ಖಾಸಗಿ ಐವಿಎಫ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಇವುಗಳಲ್ಲಿನ ಚಿಕಿತ್ಸಾ ವೆಚ್ಚಗಳು ಲಕ್ಷ ರೂಪಾಯಿಗಳ ಮೇಲಿದೆ. ಕೆಲವು ಕೇಂದ್ರಗಳು ಪ್ಯಾಕೇಜ್‌ ರೂಪದಲ್ಲಿ ಹಣ ಪಡೆದು ಸೌಲಭ್ಯ ಒದಗಿಸುತ್ತಿವೆ. ಇಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸೇವೆ ಒದಗಿಸಲು ಯೋಜಿಸಲಾಗಿದೆ. ಬಿಪಿಎಲ್‌ ಹಾಗೂ ಎಪಿಎಲ್‌ ಕುಟುಂಬಗಳಿಗೆ ಹಲವು ವಿನಾಯಿತಿಗಳೂ ಸಿಗಲಿವೆ. ಇದರಿಂದ ಬಡಜನರು ಐವಿಎಫ್‌ನಂತ ವೈದ್ಯಕೀಯ ಸೇವೆ ಪಡೆಯುವುದು ಸಾಧ್ಯವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.