ADVERTISEMENT

ಹೋಟೆಲ್ ಉದ್ಯಮದ ನೆರವಿಗೆ ಶ್ವೇತಾ ಮಡಪ್ಪಾಡಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 13:08 IST
Last Updated 24 ಜೂನ್ 2021, 13:08 IST
ಶ್ವೇತಾ ಮಡಪ್ಪಾಡಿ
ಶ್ವೇತಾ ಮಡಪ್ಪಾಡಿ   

ಮೈಸೂರು: ಲಾಕ್‌ಡೌನ್‌ನಿಂದ ಹೋಟೆಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ನೆರವು ನೀಡಬೇಕು ಎಂದು ಗಾಯಕಿ ಶ್ವೇತಾ ಮಡಪ್ಪಾಡಿ ಒತ್ತಾಯಿಸಿದರು.

ಹೋಟೆಲ್ ಮಾಲೀಕರು ಈಗ ಕಾರ್ಮಿಕರನ್ನು ನೋಡಿಕೊಳ್ಳಲಾರದಂತಹ ದುಸ್ಥಿತಿಗೆ ತಲುಪಿದ್ದಾರೆ. ಕಾರ್ಮಿಕರ ಸ್ಥಿತಿಯೂ ದಯನೀಯ ಹಂತಕ್ಕೆ ತಲುಪಿದೆ. ಆದರೆ, ಇದುವರೆಗೂ ಸರ್ಕಾರ ಯಾವುದೇ ಬಗೆಯ ಕಾಳಜಿಯನ್ನು ಹೋಟೆಲ್ ಉದ್ಯಮದ ಮೇಲೆ ತೋರಿಲ್ಲ‌ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಹೋಟೆಲ್ ಉದ್ಯಮದಿಂದ ಹಾಲು ಮಾರಾಟ, ತರಕಾರಿ, ದಿನಸಿ, ಬಾಳೆಎಲೆ, ಕಾಫಿ, ಚಹಾ ಪುಡಿ ಮಾರಾಟ ಸೇರಿದಂತೆ ಹಲವು ಮಂದಿಯ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗುತ್ತಿದೆ. ಈಗ ಕೇವಲ ಹೋಟೆಲ್‌ನವರಿಗೆ ಮಾತ್ರವಲ್ಲ, ಇವರನ್ನು ಅವಲಂಬಿಸಿರುವವರಿಗೂ ನಷ್ಟ ಉಂಟಾಗಿದೆ. ಹಾಗಾಗಿ, ಲಾಕ್‌ಡೌನ್ ಕೊನೆಗೊಳಿಸಿ ಹೋಟೆಲ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

‘ನಾನು ನಡೆಸುತ್ತಿರುವ ಹೋಟೆಲ್‌ನ್ನು ತೆರೆಯದೇ ಇದ್ದರೂ ವಿದ್ಯುತ್ ಬಿಲ್ ₹ 27 ಸಾವಿರ ಹಾಗೂ ನೀರಿನ ಬಿಲ್ ₹ 17 ಸಾವಿರ ಬಂದಿದೆ. ಸರ್ಕಾರ ಕನಿಷ್ಠ ಇಂತಹ ಬಿಲ್‌ಗಳ ಮೇಲೆ ಹಾಗೂ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳ ಮೇಲೆ ರಿಯಾಯಿತಿ ನೀಡಬೇಕು’ ಎಂದು ಆಗ್ರಹಿಸಿದರು.

ಹೋಟೆಲ್ ಕಾರ್ಮಿಕರಿಗೆ ಸರ್ಕಾರ ಉಚಿತ ಆರೋಗ್ಯ ಸೇವೆ ಹಾಗೂ ಉಚಿತ ವಿಮಾ ಯೋಜನೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು.

ಮೈಸೂರಿನಲ್ಲಿ ಲಾಕ್‌ಡೌನ್ ನೆಪದಲ್ಲಿ ಬಹುಪಾಲು ಹೋಟೆಲ್‌ಗಳಿಗೆ ಪಾರ್ಸೆಲ್ ಸೇವೆಗೆ ಅವಕಾಶ ನೀಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಇರುವ ಪ್ರಭಾವಿ ಹೋಟೆಲ್‌ಗಳಿಗೆ ಮಾತ್ರವೇ ಕಾರ್ ಸರ್ವೀಸ್, ಚಹಾ, ಕಾಫಿ ಹಂಚಿಕೆಗೆ ಅವಕಾಶ ನೀಡಲಾಗಿದೆ. ಪೊಲೀಸರು ಸಹ ಇಲ್ಲಿ ಗ್ರಾಹಕರಾಗಿದ್ದಾರೆ. ಈ ಬಗೆಯ ಅಸಮಾನತೆ ಏಕೆ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.