ADVERTISEMENT

ವರ್ಷಾಂತ್ಯಕ್ಕೆ ‘ಗ್ರೇಟರ್ ಮೈಸೂರು’: ನಗರಾಭಿವೃದ್ದಿ ಸಚಿವ ಸುರೇಶ್‌ ಮಾಹಿತಿ

ನಗರಾಭಿವೃದ್ದಿ ಸಚಿವ ಸುರೇಶ್‌ ಮಾಹಿತಿ l ಡಿಸೆಂಬರ್‌ನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 4:24 IST
Last Updated 4 ನವೆಂಬರ್ 2025, 4:24 IST
   

ಮೈಸೂರು: ಇಲ್ಲಿನ ಹೂಟಗಳ್ಳಿ ನಗರಸಭೆ, 4 ಪಟ್ಟಣ ಪಂಚಾಯಿತಿ ಹಾಗೂ 8 ಗ್ರಾಮ ಪಂಚಾಯಿತಿಗಳನ್ನು ಮೈಸೂರು ಮಹಾನಗರ ಪಾಲಿಕೆಗೆ ಸೇರಿಸುವ ‘ಗ್ರೇಟರ್‌ ಮೈಸೂರು ಮಹಾನಗರ ಪಾಲಿಕೆ’ ‍ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಶಾರದಾದೇವಿನಗರದ ಪಾಲಿಕೆ ವಲಯ ಕಚೇರಿ–3ರ ಸಭಾಂಗಣದಲ್ಲಿ ನಡೆದ ಮಹಾನಗರಪಾಲಿಕೆ ವ್ಯಾಪ್ತಿ ವಿಸ್ತರಣೆ ಕುರಿತ ಸಭೆಯಲ್ಲಿ, ‘ಡಿಸೆಂಬರ್‌ನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ನಗರಾಭಿವೃದ್ಧಿ ಸಚಿವ ಬಿ.ಎಸ್‌.ಸುರೇಶ್‌, ‘ಬೆಂಗಳೂರು ನಂತರ ಮೈಸೂರು ವೇಗವಾಗಿ ಬೆಳೆಯುತ್ತಿದೆ. ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು, 86.31 ಚದರ ಕಿ.ಮೀನಷ್ಟಿರುವ ಪಾಲಿಕೆಯ ವ್ಯಾಪ್ತಿಯನ್ನು 333.46 ಚದರ ಕಿ.ಮೀ.ಗೆ ಹೆಚ್ಚಿಸಲಾಗುವುದು. ಅದರಿಂದ 11.46 ಲಕ್ಷರಷ್ಟಿದ್ದ ಜನಸಂಖ್ಯೆ ಜೊತೆಗೆ ಪಾಲಿಕೆ ವ್ಯಾಪ್ತಿಗೆ ₹ 2.7 ಲಕ್ಷ ಜನರು ಸೇರ್ಪಡೆಯಾಗಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಸೌಲಭ್ಯ ಸಿಗಲಿದೆ: ‘ಹೊರವಲಯದಲ್ಲಿ ಇರುವ ಎಲ್ಲ ಸಮಸ್ಯೆಗಳಿಗೆ ಬಗೆಹರಿಯಲಿದೆ. ರಸ್ತೆ, ವಿದ್ಯುತ್‌, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಸಿಗಲಿದೆ. ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವಿತ ಸ್ಥಳೀಯ ಸಂಸ್ಥೆಗಳು ಸೇರ್ಪಡೆಯಾಗಲಿವೆ’ ಎಂದು ಹೇಳಿದರು. 

₹ 500 ಕೋಟಿ ವೆಚ್ಚ: ‘ಗ್ರೇಟರ್‌ ಮೈಸೂರು ಅಭಿವೃದ್ಧಿ ಯೋಜನೆಗೆ ಬೇಕಾದ ಅನುದಾನದ ಪ್ರಸ್ತಾವ ಸಲ್ಲಿಸಬೇಕು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ’ದಲ್ಲಿ (ಎಂಡಿಎ) ₹ 500 ಕೋಟಿ ಆದಾಯ ಸಂಗ್ರಹವಿದ್ದು, ಅದನ್ನು ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳುವಂತೆ ಸಿ.ಎಂ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಹಾಯ ಧನವೂ ಬರಲಿದ್ದು, ಆ ಹಣವನ್ನು ವಿನಿಯೋಗಿಸಲಾಗುವುದು’ ಎಂದು ಸುರೇಶ್‌ ತಿಳಿಸಿದರು. 

‘ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ತಜ್ಞರ ಸಲಹಾ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ನಾನು ಉಪಾಧ್ಯಕ್ಷರಾಗಿರುತ್ತೇವೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಸದಸ್ಯರಾಗಿರುತ್ತಾರೆ’ ಎಂದು ವಿವರಿಸಿದರು.

‘ಮೈಸೂರು ಜಿಲ್ಲೆಯು ಸಂಪದ್ಭರಿತವಾಗಿದ್ದು, ಒಳ್ಳೆಯ ಗಾಳಿ, ನೀರು, ಅರಣ್ಯವಿದೆ. ನಗರ ಯೋಜನಾಬದ್ಧವಾಗಿ ಬೆಳೆಸುವುದು ಸರ್ಕಾರದ ಆಶಯವಾಗಿದ್ದು, ಸಮಗ್ರ ಮೈಸೂರು ಅಭಿವೃದ್ಧಿಯೇ ಗುರಿಯಾಗಿದೆ. ಎಂಡಿಎ ವ್ಯಾಪ್ತಿಯನ್ನು  500 ಚದರ ಕಿ.ಮೀನಿಂದ 1,000 ಚದರ ಕಿ.ಮೀಗೆ ಹೆಚ್ಚಿಸಲಾಗುವುದು’ ಎಂದು ತಿಳಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್‌ ಸೇಠ್‌, ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ವಿಧಾನಪರಿಷತ್‌ ಸದಸ್ಯರಾದ ಎ.ಎಚ್‌.ವಿಶ್ವನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ, ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರಪಾಲಿಕೆ ಆಯುಕ್ತ ಶೇಖ್‌ ತನ್ವೀರ್ ಆಸೀಫ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಯುಕೇಶ್‌ ಕುಮಾರ್, ಎಂಡಿಎ ಆಯುಕ್ತ ರಕ್ಷಿತ್ ಪಾಲ್ಗೊಂಡಿದ್ದರು. 

Highlights - ಪಾಲಿಕೆ ವ್ಯಾಪ್ತಿ  333.46 ಚದರ ಕಿ.ಮೀ.ಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಕ್ರಮ  ‘ಎಂಡಿಎ’ದ ₹ 500 ಕೋಟಿ ಬಳಕೆಗೆ ಸೂಚನೆ 

Cut-off box - ವೈಜ್ಞಾನಿಕ ನೀಲಿನಕ್ಷೆ ತಯಾರಿಸಿ: ಸಿ.ಎಂ  ‘ಬೆಂಗಳೂರಿನ‌ ರೀತಿ ಸಂಚಾರ ಸಮಸ್ಯೆ ಒಳಚರಂಡಿ ಫುಟ್‌ಪಾತ್ ಕುಡಿಯುವ ನೀರು ಸೇರಿದಂತೆ ಯಾವ ಸಮಸ್ಯೆಯೂ ಬಾರದಂತೆ ವೈಜ್ಞಾನಿಕ ನೀಲಿನಕ್ಷೆ ಸಿದ್ಧಪಡಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  ‘ಮೈಸೂರಿನ ಘನತೆ ಸಂಸ್ಕೃತಿ ಪಾರಂಪರಿಕತೆ ಹಾಗೂ ವಿಶಾಲತೆಗೆ ಧಕ್ಕೆ ಆಗಬಾರದು‌. ವಿಶಾಲವಾದ ರಸ್ತೆಗಳು ನಗರದ ಹೆಗ್ಗಳಿಕೆಯಾಗಿದ್ದು ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾಬದ್ಧವಾಗಿರಬೇಕು. ಈಗಿನ ಜನಸಂಖ್ಯೆಗೆ ಮಾತ್ರ ಯೋಜನೆ ರೂಪಿಸದೆ ಮುಂದಿನ 20 ವರ್ಷಗಳ ಮುಂದಾಲೋಚನೆ ಇರಬೇಕು’ ಎಂದರು.  ‘ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಘನತ್ಯಾಜ್ಯ ನಿರ್ವಹಣೆ ತ್ಯಾಜ್ಯ ವಿಲೇವಾರಿ ಕೈಗಾರಿಕಾ ತ್ಯಾಜ್ಯ ವಿಲೇವಾರಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು. ಬಡಾವಣೆ ನಿರ್ಮಾಣ ಮಾಡುವಾಗ ಮಳೆ ನೀರು ಚರಂಡಿ ರಸ್ತೆ ಒಳಚರಂಡಿ ನೀರು ಉದ್ಯಾನಗಳೂ ಇರಬೇಕು’ ಎಂದು ಹೇಳಿದರು.  ಮತ್ತೊಂದು ವರ್ತುಲ ರಸ್ತೆ: ‘ಮೈಸೂರಿಗೆ ಮತ್ತೊಂದು ಹೊರ ವರ್ತುಲ ರಸ್ತೆ ಅಗತ್ಯವಿದ್ದು ಈಗಲೇ ಯೋಜನೆ ರೂಪಿಸಿಕೊಳ್ಳಬೇಕು. ‍ಪಾಲಿಕೆಯ ಆದಾಯವೂ ಹೆಚ್ಚಾಗುವಂತೆ ಯೋಚನೆ ರೂಪಿಸಬೇಕು. ಅದಕ್ಕೆ ಸ್ಪಷ್ಟ ಅಂದಾಜು ಯೋಜನೆ ರೂಪಿಸಿಕೊಳ್ಳಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗಬೇಕು’ ಎಂದು ಸಲಹೆ ನೀಡಿದರು.

ಸೇರ್ಪಡೆ ಆಗುವ ಪ್ರದೇಶಗಳು

* ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಕೂರ್ಗಳ್ಳಿ ಹೆಬ್ಬಾಳ ಬೆಳವಾಡಿ ಹಿನಕಲ್ ವಿಜಯನಗರ 4ನೇ ಹಂತ

* ಶ್ರೀರಾಂಪುರ ಪಟ್ಟಣ ಪಂಚಾಯಿತಿ: ಶ್ರೀರಾಂಪುರ ಲಿಂಗಾಬುಧಿಪಾಳ್ಯ ಗುರೂರು ಕೊಪ್ಪಲೂರು ಕಳಲವಾಡಿ

* ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ: ರಮ್ಮನಹಳ್ಳಿ ಆಲನಹಳ್ಳಿ ನಾಡನಹಳ್ಳಿ ಹಂಚ್ಯಾ ಸಾತಗಳ್ಳಿ l ಕಡಕೊಳ ಪಟ್ಟಣ ಪಂಚಾಯಿತಿ: ಗುಡಮಾದನಹಳ್ಳಿ ಬಂಡೀಪಾಳ್ಯ ಹೊಸಹುಂಡಿ ಮರಸೆ ಮದರಗಳ್ಳಿ ಮಂಡಕಳ್ಳಿ ಸರ್ಕಾರಿ ಉತ್ತನಹಳ್ಳಿ

* ಬೋಗಾದಿ ಪಟ್ಟಣ ಪಂಚಾಯಿತಿ: ಬೋಗಾದಿ ಮರಟಿಕ್ಯಾತನಹಳ್ಳಿ ಜಟ್ಟಿಹುಂಡಿ ಕೇರ್ಗಳ್ಳಿ ಬಸವನಹಳ್ಳಿ ಮಾದಗಳ್ಳಿ ಕೆ.ಹೆಮ್ಮನಹಳ್ಳಿ

* ಗ್ರಾಮ ಪಂಚಾಯಿತಿಗಳು: ಚಾಮುಂಡಿಬೆಟ್ಟ ಆಲನಹಳ್ಳಿ ಸಿದ್ಧಲಿಂಗಪುರ ಧನಗಳ್ಳಿ ಇಲವಾಲ ಬೀರಿಹುಂಡಿ ನಾಗವಾಲ ನಾಗನಗಳ್ಳಿ ಗ್ರಾ.ಪಂನ ಶ್ಯಾದನಹಳ್ಳಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.