ADVERTISEMENT

ನಗರದ ಹಸಿರೀಕರಣಕ್ಕೆ ಪಣ

ವಿಶ್ವ ಪರಿಸರ ದಿನಾಚರಣೆಗೆ ಕೈ ಜೋಡಿಸಿದ ಸಂಘ, ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 20:08 IST
Last Updated 5 ಜೂನ್ 2019, 20:08 IST
ಮೈಸೂರಿನ ಹೆಬ್ಬಾಳ ಕೆರೆ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಜಿ.ಟಿ.ದೇವೇಗೌಡ ಬುಧವಾರ ಸಸಿ ನೆಟ್ಟು ನೀರೆರೆದರು
ಮೈಸೂರಿನ ಹೆಬ್ಬಾಳ ಕೆರೆ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಜಿ.ಟಿ.ದೇವೇಗೌಡ ಬುಧವಾರ ಸಸಿ ನೆಟ್ಟು ನೀರೆರೆದರು   

ಮೈಸೂರು: ವಿಶ್ವ ಪರಿಸರ ದಿನಾಚರಣೆಯಂದು ಬುಧವಾರ ಸಾಂಸ್ಕೃತಿಕ ನಗರಿಯನ್ನು ಹಸಿರೀಕರಣಗೊಳಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ಜತೆ ವಿವಿಧ ಸಂಘ, ಸಂಸ್ಥೆಗಳು ಕೈ ಜೋಡಿಸಿದವು.

ಗಿಡಗಳನ್ನು ನೆಡುವ, ಸಸಿಗಳನ್ನು ಹಂಚುವ ದೃಶ್ಯಗಳು ಸಾಮಾನ್ಯವಾಗಿದ್ದವು. ಸೈಕಲ್ ಜಾಥಾ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಹಸಿರಿನ ಮಹತ್ವವನ್ನು ಸಾರಲಾಯಿತು.

ಪಾಲಿಕೆ ಮತ್ತು ಐಟಿಸಿ ವಾವ್ ಕಂಪನಿ ವತಿಯಿಂದ ಕೆ.ಆರ್.ವೃತ್ತದಲ್ಲಿ ಜಾಗೃತಿ ಜಾಥಾ ಬುಧವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು. ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕರ್ತರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ADVERTISEMENT

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪರಿಸರ ಸಂರಕ್ಷಣೆ ಕುರಿತ ಸೈಕಲ್ ಜಾಥಾಕ್ಕೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ಚಾಲನೆ ನೀಡಿದರು. ‘ಸಸಿ ಬೆಳೆಸಿ ಶಿಶು ಉಳಿಸಿ’ ಮೊದಲಾದ ಫಲಕಗಳನ್ನಿಡಿದ ಮಕ್ಕಳು ಸೈಕಲ್‌ನಲ್ಲಿ ಸಾಗುವ ಮೂಲಕ ಅರಿವು ಮೂಡಿಸಿದರು.

ಜೆಎಸ್‌ಎಸ್ ಆಸ್ಪತ್ರೆಯ ಆವರಣದಲ್ಲಿ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು. ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡ, ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ, ಮುಖ್ಯ ಆಡಳಿತಾಧಿಕಾರಿ ಬಸವರಾಜ್ ಕುಪ್ಪಸದ್, ಮುಖ್ಯ ಎಂಜಿನಿಯರ್ ವಿಜಯ ಬೆನ್ನೂರು, ಸ್ಥಾನೀಯ ವೈದ್ಯಾಧಿಕಾರಿ ಡಾ.ಶಾಂತಮಲ್ಲಪ್ಪ ಇದ್ದರು.

ಜಯದೇವ ಹೃದ್ರೋಗ ಆಸ್ಪತ್ರೆ ಆವರಣದಲ್ಲಿ ಸಪ್ತನಾದಸ್ವರ ಟ್ರಸ್ಟ್‌ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಅಜಿತ್‌, ಡಾ.ಮಂಜುನಾಥ್‌ ಗಿಡ ನೆಟ್ಟರು.

ಮೈಸೂರು ಘಟಕದ ಮುಖ್ಯಸ್ಥ ಡಾ.ಕೆ.ಎಸ್‌.ಸದಾನಂದ, ಡಾ.ವೀಣಾ, ಡಾ.ಹೇಮಾ, ಡಾ.ಶ್ವೇತಾ, ಡಾ.ರಜಿತ್‌, ಡಾ.ಪಾಂಡು, ನರ್ಸಿಂಗ್‌ ಅಧೀಕ್ಷಕ ಹರೀಶ್‌ ಕುಮಾರ್‌, ವಾಣಿ, ಸೈಯದ್‌ ಇದ್ದರು.

ಸಸ್ಯಾರಾಧನಾ ಸಮಿತಿ ವತಿಯಿಂದ ಹೆಬ್ಬಾಳುವಿನ ಅನ್ನಪೂರ್ಣೇಶ್ವರಿ ದೇವಸ್ಥಾನ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಪ್ರಮತಿ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸನ್‌ಪ್ರೀತ್ ಸೋಲಾರ್ ಸಿಸ್ಟಮ್ಸ್, ಪ್ರಮತಿ ಹಿಲ್ ವ್ಯೂ ಅಕಾಡೆಮಿ ವತಿಯಿಂದ ಸೋಲಾರ್ ಅಡುಗೆ ಮನೆ ಪ್ರಾತ್ಯಕ್ಷಿಕೆ ಹಾಗೂ ತಜ್ಞರೊಂದಿಗೆ ಸಂವಾದವೂ ಇತ್ತು.

ಪುಟ್ಟಸ್ವಾಮಿ ಮೆಮೊರಿಯಲ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಹರೂ ಯುವ ಕೇಂದ್ರ, ಅಭ್ಯುದಯ ಮಹಿಳಾ ಸಮಾಜ, ಲಯನ್ಸ್ ಕ್ಲಬ್ ಆಫ್ ಜೆ.ಪಿ.ನಗರದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

ಎಂಜಿನಿಯರುಗಳ ಸಂಸ್ಥೆಯಲ್ಲಿ ‘ವಾಯು ಮಾಲಿನ್ಯ’ ಕುರಿತು ಪ್ರೊ.ಅಲಕಾನಂದ ಜೆ.ಅಡೂರ್ ಅವರು ಉಪನ್ಯಾಸ ನೀಡಿದರು. ವಾಯುಮಾಲಿನ್ಯದಿಂದಾಗುವ ದುಷ್ಪರಿಣಾಮಗಳನ್ನು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.