
ಮೈಸೂರು ವಿಶ್ವವಿದ್ಯಾಲಯ ಮತ್ತು ಐಜಿಬಿಸಿ ನಡುವೆ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಯಿತು
ಮೈಸೂರು: ಹಸಿರು ಕಟ್ಟಡ ಹಾಗೂ ಸ್ಥಿರತೆ ಕ್ಷೇತ್ರದಲ್ಲಿ ಸಹಯೋಗಕ್ಕಾಗಿ ಇಲ್ಲಿನ ಮೈಸೂರು ವಿಶ್ವವಿದ್ಯಾಲಯ ಮತ್ತು ಐಜಿಬಿಸಿ (ಭಾರತೀಯ ಹಸಿರು ಕಟ್ಟಡ ಪರಿಷತ್ತು) ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಹಸಿರು ಕಟ್ಟಡ ತತ್ವಗಳು, ಸ್ಥಿರತೆ ಸಂಶೋಧನೆ, ಕೌಶಲ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಪರಿಸರ ತೊಡಗಿಸಿಕೊಳ್ಳುವಿಕೆ ಉತ್ತೇಜಿಸಲು ಪರಸ್ಪರ ಸಹಯೋಗಕ್ಕೆ ಉದ್ದೇಶಿಸಲಾಗಿದೆ.
ವಿಶ್ವವಿದ್ಯಾಲಯದ ಪರವಾಗಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮತ್ತು ಐಜಿಬಿಸಿ ಮೈಸೂರು ಅಧ್ಯಾಯದ ಪರವಾಗಿ ವಿನೋದ ಮಾರುಳಿ ಹಾಗೂ ಶ್ರೀಹರಿ ಎಂಒಯುಗೆ ಸಹಿ ಹಾಕಿದರು.
ಕುಲಸಚಿವರಾದ ಎಂ.ಕೆ. ಸವಿತಾ ಮತ್ತು ನಾಗರಾಜ, ಐಜಿಬಿಸಿ ಮೈಸೂರು ಅಧ್ಯಾಯದ ಉಪಾಧ್ಯಕ್ಷ ಶ್ರೀಹರಿ ದ್ವಾರಕನಾಥ್, ಸದಸ್ಯರಾದ ಕೆ. ಶ್ರೀರಾಮ್, ಸೋಮಶೇಖರ್, ರಮೇಶ್ ಕಿಕ್ಕೇರಿ, ಎನ್‌ಐಇ –ಕ್ರೆಸ್ಟ್‌ನ ಶ್ಯಾಮ್‌ಸುಂದರ್ ಪಾಲ್ಗೊಂಡಿದ್ದರು.
ಶೈಕ್ಷಣಿಕ ವಲಯದಲ್ಲಿ ಹಸಿರು ಕಟ್ಟಡ ಪರಿಕಲ್ಪನೆಗಳ ಪ್ರಚಾರ, ತರಬೇತಿ, ಕಾರ್ಯಾಗಾರ, ಸಮ್ಮೇಳನ ಹಾಗೂ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮಗಳು, ಸಂಶೋಧನೆ ಹಾಗೂ ಸಾಮರ್ಥ್ಯವರ್ಧನೆ ಕ್ಷೇತ್ರಗಳಲ್ಲಿ ಸಹಯೋಗ, ಉದ್ಯಮ–ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರ ಬಲಪಡಿಸುವಿಕೆಯ ಉದ್ದೇಶವನ್ನು ಹೊಂದಲಾಗಿದೆ.
‘ಈ ಸಹಯೋಗವು ಮೈಸೂರನ್ನು ಸ್ಥಿರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿಡುವ ಮಹತ್ವದ ಹೆಜ್ಜೆಯಾಗಿದೆ. ಶಿಕ್ಷಣ ಸಂಸ್ಥೆಗಳ ಜ್ಞಾನ ಮತ್ತು ಉದ್ಯಮದ ಹಸಿರು ಮಾನದಂಡಗಳನ್ನು ಸಂಯೋಜಿಸಿ ಪರಿಸರ ಸ್ನೇಹಿ ಸಂಸ್ಕೃತಿಯನ್ನು ಬಲಪಡಿಸಲು ನೆರವಾಗಲಿದೆ. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾರ್ವಜನಿಕ ಸಂಸ್ಥೆಗಳು ಹಸಿರು ಭವಿಷ್ಯ ನಿರ್ಮಾಣದಲ್ಲಿ ಪಾಲ್ಗೊಳ್ಳಲು ವೇದಿಕೆ ರೂಪಿಸಲಿದೆ’ ಎಂದು ಮೈಸೂರು ವಿವಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.