ADVERTISEMENT

ಅಂತರ್ಜಲ ವೃದ್ಧಿಸುವ ಮರಗಳು

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 19:45 IST
Last Updated 3 ಜೂನ್ 2019, 19:45 IST
ಮರಗಳು
ಮರಗಳು   

ಜಾಗತಿಕ ತಾಪಮಾನ ಹೆಚ್ಚುತ್ತಲೇ ಇದ್ದು, ಇದು ಈಗಿನ ಬಹುದೊಡ್ಡ ಸಮಸ್ಯೆಯಾಗಿದೆ. ನಗರಗಳು ಬೆಳೆಯುತ್ತಲೇ ಇವೆ. ಇದರಿಂದ ಬಯಲು ಭೂಮಿ, ಜಲಕಾಯಗಳು, ಸಸ್ಯ ಸಂಕುಲ ನಶಿಸುತ್ತಿವೆ. ಕೆರೆಗಳು ಕಾಣದಂತಾಗಿವೆ. ಹೀಗಾಗಿ ನೀರಿನ ಸಮಸ್ಯೆ, ಆಹಾರದ ಕೊರತೆ ಎದುರಾಗಿದೆ. ಅಷ್ಟೇ ಅಲ್ಲ, ವಸತಿ ಯೋಗ್ಯ ಪ್ರದೇಶಗಳೂ ಕಡಿಮೆಯೇ ಇವೆ.

ಮರಗಳನ್ನು ಬೆಳೆಸಬೇಕು, ಅವುಗಳ ಸುತ್ತ ನೀರು ನಿಲ್ಲುವಂತೆ ಮಡಿ (ತಗ್ಗು) ಮಾಡಿದರೆ ಮಳೆ ನೀರು ಅಲ್ಲಿ ಸಂಗ್ರಹವಾಗಿ ಅಂತರ್ಜಲ ಹೆಚ್ಚುತ್ತದೆ. ಎಲ್ಲಿ ಸ್ಥಳಾವಕಾಶವಿದೆಯೋ ಅಲ್ಲಿ ಮರಗಳನ್ನು ಬೆಳೆಸಬೇಕು. ಮರಗಳನ್ನು ಬೆಳೆಸುವುದರಿಂದ ಹಲವು ಲಾಭಗಳು ಉಂಟು. ಉಸಿರಾಡಲು ಆಮ್ಲಜನಕ ಹೆಚ್ಚುತ್ತದೆ. ಹಣ್ಣಿನ ಮರಗಳಾಗಿದ್ದರೆ ಪ್ರಾಣಿ, ಪಕ್ಷಿಗಳು ಹಾಗೂ ಮಾನವರ ಉದರ ತುಂಬಿಸಲು ನೆರವಾಗುತ್ತವೆ.

‘ರಸ್ತೆ ಬದಿ ಹಾಗೂ ಕಾಡಿನಲ್ಲಿ ನೆಲಮಟ್ಟದಿಂದ 300 ಮಿ.ಮೀ ಕೆಳಗೆ ಸಸಿ ನೆಟ್ಟು ಅದರ ಸುತ್ತ ಹಳ್ಳ ತೊಡುವುದರಿಂದ ಪ್ರತಿ ಮರದ
ಸುತ್ತ ಸುಮಾರು 2 ಸಾವಿರದಿಂದ 5 ಸಾವಿರ ಲೀಟರ್ ನೀರು ಸಂಗ್ರಹ ಮಾಡಬಹುದು. ಇದರಿಂದ ಮರಗಳು ನೀರು ಸಂಗ್ರಹದ ಬಿಂದುಗಳು ಆಗಲಿವೆ’ ಎಂದು ಇಸ್ರೊ ನಿವೃತ್ತ ವಿಜ್ಞಾನಿ ಮೈಸೂರಿನ ಪ್ರೊ.ವಿ. ಜಗನ್ನಾಥ ಹೇಳುತ್ತಾರೆ.

ADVERTISEMENT

ಸುಮ್ಮನೆ ಹರಿದು ಹೋಗುವ ಮಳೆ ನೀರನ್ನು ಮರಗಳು ತಡೆಯುವುದರಿಂದ ಭೂಮಿಯಲ್ಲಿ ನೀರು ಸಂಗ್ರಹವಾಗಿ ಅಂತರ್ಜಲಮಟ್ಟ ತಾನೇ ಹೆಚ್ಚುತ್ತದೆ.

ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಬೋರ್‌ವೆಲ್ ನೀರು ಸಿಗುವುದು ಕಷ್ಟ. ಸಿಕ್ಕರೂ ಬಹಳ ಬೇಗ ಬರಿದಾಗುತ್ತದೆ. ಇದನ್ನು ತಪ್ಪಿಸಲು ಬೋರ್‌ವೆಲ್‌ ಸುತ್ತ ಹತ್ತಾರು ಅಡಿ ತಗ್ಗು ತೆಗೆದು ಜಲ್ಲಿ ಕಲ್ಲು ಹಾಕಿ ಸಿಮೆಂಟ್‌ ಅಥವಾ ಕಲ್ಲಿನ ಕಟ್ಟೆ ಕಟ್ಟಬೇಕು. ಸುತ್ತಲಿನ ಪ್ರದೇಶದಲ್ಲಿ ಸರಾಗವಾಗಿ ಬೇರೆಡೆ ಹರಿದು ಹೋಗುವ ನೀರು ಈ ಇಂಗು ಗುಂಡಿಗೆ ಬರುವಂತೆ ಮಾಡಲಾಗುತ್ತಿದೆ.

ಇದರಿಂದ ಬತ್ತಿದ ಕೊಳವೆಬಾವಿಗಳಲ್ಲಿ ಜಲ ಮರುಪೂರಣವಾಗಿ ಮತ್ತೆ ನೀರು ಹೊರಚೆಲ್ಲುತ್ತಿವೆ. ಕೆಲವೆಡೆ ಬೋರ್‌ವೆಲ್ ಕೊರೆದಾಗ ಇರುವ ನೀರಿನ ಪ್ರಮಾಣ ನಂತರ ಹೆಚ್ಚಾಗಿದೆ. ಈ ಪ್ರಯೋಗ ಎಲ್ಲೆಡೆ ನಡೆಯಬೇಕು. ಆಗ ಮಳೆ ನೀರು ಸಂಗ್ರಹ ತನ್ನಿಂದ ತಾನೇ ಹೆಚ್ಚಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.