ADVERTISEMENT

ಒಂದೇ ವೇದಿಕೆಯಲ್ಲಿ ಜಿಟಿಡಿ, ಸಿದ್ದರಾಮಯ್ಯ!

ರಾಜಕೀಯ ವೈರತ್ವ ಮರೆತು ಹೊಗಳಿದರು, ಹಣ್ಣು ತಿನ್ನಿಸಿದರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 19:41 IST
Last Updated 9 ನವೆಂಬರ್ 2021, 19:41 IST
ಮೈಸೂರಿನ ಹಿನಕಲ್‌ ಗ್ರಾಮದಲ್ಲಿ ಮಂಗಳವಾರ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಗುವಿನ ಕ್ಷಣ.
ಮೈಸೂರಿನ ಹಿನಕಲ್‌ ಗ್ರಾಮದಲ್ಲಿ ಮಂಗಳವಾರ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಗುವಿನ ಕ್ಷಣ.   

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯ ವೈರತ್ವ ಮರೆತು ನಗರದಲ್ಲಿ ಮಂಗಳವಾರ ಎರಡು ಕಾರ್ಯಕ್ರಮಗಳಲ್ಲಿ ವೇದಿಕೆಯನ್ನು ಹಂಚಿಕೊಂಡು, ಸೌಹಾರ್ದ ಪ್ರದರ್ಶಿಸಿ ಅಚ್ಚರಿ ಮೂಡಿಸಿದರು. ಪರಸ್ಪರ ಹೊಗಳಿದರು. ಹಿನಕಲ್ ಹಾಗೂ ಕೇರ್ಗಳ್ಳಿಯಲ್ಲಿ ನಡೆದ ಕಾರ್ಯಕ್ರಮ ಈ ಅಪರೂಪದ ಸಮಾಗಮಕ್ಕೆ ಸಾಕ್ಷಿಯಾಯಿತು.

‘ಡಾ.ಎಚ್.ಸಿ.ಮಹದೇವಪ್ಪ ಅವರಂತಹ ದಲಿತ ನಾಯಕರನ್ನು ಬೆಳೆಸಿದ್ದೇ ಸಿದ್ದರಾಮಯ್ಯ. ವೀರಶೈವ ಸಮಾಜದ ಮುಖಂಡರನ್ನೂ ಬೆಳೆಸಿದ್ದಾರೆ. ಚುನಾವಣೆಯಲ್ಲಿ ಸೋತರೂ ಜನ ಪ್ರೀತಿಸುವಂತಹ ನಾಯಕ ಅವರು’ ಎಂದು ದೇವೇಗೌಡರು ಶ್ಲಾಘಿಸಿದರು.

‘ಜಿ.ಟಿ.ದೇವೇಗೌಡರನ್ನು ಜೆಡಿಎಸ್‌ನಲ್ಲೇ ಉಳಿಸಿಕೊಳ್ಳಲು ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಯತ್ನಿಸಿದ್ದಾರೆ. ಆದರೂ ಅವರು ಬರುವುದಾದರೆ ಸ್ವಾಗತ’ ಎಂದು ಆಹ್ವಾನವಿತ್ತ ಸಿದ್ದರಾಮಯ್ಯ, ‘ಜಿ.ಟಿ. ಕೇಳ್ತಾ ಇದ್ದೀಯೇನಪ್ಪಾ’ ಎಂದು ಆತ್ಮೀಯತೆ ತೋರಿದರು.

ADVERTISEMENT

ಅದಕ್ಕೂ ಮುಂಚೆ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ‘ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಅಕ್ಕ–ಪಕ್ಕ ಕುಳಿತಿದ್ದಾರೆ ಹೊಡಿರಿ ಚಪ್ಪಾಳೆ’ ಎಂದು ಹೇಳಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ಈಚೆಗೆ ಇಲ್ಲಿಗೆ ಸಮೀಪದ ಬೆಳವಾಡಿಯಲ್ಲಿ ನಡೆದಿದ್ದ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು. ಜಿ.ಟಿ.ದೇವೇಗೌಡ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.