ಮೈಸೂರು: ‘ರೈತರು ಕೃಷಿ ಹಾಗೂ ತೋಟಗಾರಿಕೆಯಲ್ಲಿ ಆಧುನಿಕ ಪದ್ಧತಿ ಅನುಸರಿಸಿ ಉತ್ತಮ ಆದಾಯ ಕಂಡುಕೊಳ್ಳಬೇಕು’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು.
ತಾಲ್ಲೂಕಿನ ಯಲಚಹಳ್ಳಿಯಲ್ಲಿರುವ ತೋಟಗಾರಿಕೆ ಕಾಲೇಜಿನ ಆವರಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಸಹಯೋಗದಲ್ಲಿ ಹುಣಸೂರು ತಾಲ್ಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ರೈತರಿಗೆ ಏರ್ಪಡಿಸಿದ್ದ ತೋಟಗಾರಿಕೆ ಆಧಾರಿತ ಕೃಷಿ ಪದ್ಧತಿಯ ತರಬೇತಿ ಮತ್ತು ಪರಿಕರಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಬರುವಂತಹ ಬೆಳೆಗಳನ್ನು ಬೆಳೆಯುವ ಕಡೆಗೆ ರೈತರು ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.
‘ಪ್ರಸ್ತುತ ದಿನಗಳಲ್ಲಿ ಬೇಸಾಯ ಕಷ್ಟದ ಕೆಲಸವಾಗಿದೆ. ಏನೇ ಕಷ್ಟವಾದರೂ ಭೂಮಿ ತಾಯಿಯನ್ನು ನಂಬಿಕೊಂಡು ಬಿತ್ತನೆ ಮಾಡುತ್ತೇವೆ. ಭೀಕರ ಬರಗಾಲ ಬಂದಾಗ ಒಣಗುತ್ತದೆ. ಒಂದೊಮ್ಮೆ ಮಳೆ ಜಾಸ್ತಿಯಾದರೂ ತೊಂದರೆ ಆಗುತ್ತದೆ. ಆದರೆ, ತೋಟಗಾರಿಕೆ ಬೆಳೆಯಲ್ಲಿ ಈ ರೀತಿ ಆಗುವುದಿಲ್ಲ’ ಎಂದರು.
‘ದಾಳಿಂಬೆ, ಸಪೋಟ, ಪಪ್ಪಾಯಿ ಬೆಳೆಗಳನ್ನು ಸುಲಭವಾಗಿ ಬೆಳೆಯಬಹುದು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವೂ ಬರುತ್ತದೆ’ ಎಂದು ತಿಳಿಸಿದರು.
ಹಣ ಸಿಗುತ್ತದೆ:
‘ಹೊಗೆಸೊಪ್ಪು ಬೆಳೆಯುವ ಜೊತೆಗೆ ತರಕಾರಿ, ಹೂವು ಹಾಕಿದರೆ ಖರ್ಚಿಗೆ ದುಡ್ಡು ಬರುತ್ತದೆ. ಎರಡು ಎಕರೆಯಲ್ಲಿ ಒಂದು ಎಕರೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ಇಂದು ತರಕಾರಿ, ಹಣ್ಣುಗಳ ದರ ಹೆಚ್ಚಾಗಿರುವ ಕಾರಣ ಆದಾಯ ತಪ್ಪುವುದಿಲ್ಲ. ತೋಟಗಾರಿಕೆಗೆ ಹೆಚ್ಚು ನೀರು ಬೇಕಿಲ್ಲ. ಹನಿ ನೀರಾವರಿ ಅಳವಡಿಸಿಕೊಳ್ಳಬಹುದು. ಹನಿ, ತುಂತುರು ನೀರಾವರಿಗೆ ಸರ್ಕಾರದಿಂದ ಸಹಾಯಧನ ದೊರೆಯುತ್ತಿದ್ದು, ಅದನ್ನು ಬಳಸಿಕೊಂಡು ಮುಂದೆ ಬರಬೇಕು’ ಎಂದರು.
‘ಯಾವ ಕಾಲದಲ್ಲಿ ಯಾವ ಬೆಳೆ ಹಾಕಬೇಕು, ಯಾವ್ಯಾವ ಸಮಯದಲ್ಲಿ ಬೆಲೆ ಹೆಚ್ಚಾಗುತ್ತದೆ ಎಂಬುದನ್ನು ನೋಡಿಕೊಂಡು ಬೆಳೆಗಳನ್ನು ಹಾಕಬೇಕು. ತರಕಾರಿ ಪದಾರ್ಥಗಳಿಗೆ ನಿತ್ಯವೂ ಬೆಲೆ ಇರುತ್ತದೆ. ಟೊಮೆಟೊ, ಹೂಕೋಸು, ಸೊಪ್ಪಿಗೆ ಬೆಲೆ ಇದ್ದೇ ಇರುತ್ತದೆ. ಇಂಥವನ್ನು ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.
ತೋಟಗಾರಿಕೆ ಕಾಲೇಜಿನ ಡೀನ್ ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಗೇರು ಸಂಶೋಧನಾ ಸಂಸ್ಥೆ ವಿಜ್ಞಾನಿ ಸಿ.ಎನ್.ಮಂಜೇಶ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಾಗರಾಜು, ಸಂಪನ್ಮೂಲ ವ್ಯಕ್ತಿಗಳಾಗಿ ಆರ್.ಸಿದ್ದಪ್ಪ, ಕೆ.ಸಿ. ಕಿರಣಕುಮಾರ್, ಕೆ.ಎಂ.ಶಿವಕುಮಾರ್, ಮನುಕುಮಾರ್ ಭಾಗವಹಿಸಿದ್ದರು.
ತೋಟಗಾರಿಕೆ ಕಾಲೇಜಿನಿಂದ ಆಯೋಜನೆ ಗೇರು ಸಂಶೋಧನಾ ನಿರ್ದೇಶನಾಲಯದ ಸಹಯೋಗ ರೈತರಿಗೆ ಪರಿಕರಗಳ ವಿತರಣೆ
ಕೆಲವರು ಮಕ್ಕಳ ಮದುವೆಗಾಗಿ ಮಾಡಿದ ಸಾಲ ತೀರಿಸಲು ಜಮೀನು ಮಾರುತ್ತಾರೆ. ಅದರ ಬದಲಿಗೆ ಸರಳ ವಿವಾಹ ಮಾಡಿ ಜಮೀನು ಉಳಿಸಿಕೊಳ್ಳಬೇಕುಜಿ.ಟಿ. ದೇವೇಗೌಡ ಶಾಸಕ
ಡಿಸಿಎಂ ಆಗುತ್ತಿದ್ದೆ...
‘ಹುಣಸೂರಿನ ಕ್ಷೇತ್ರದ ಜನರು ಕೈ ಹಿಡಿದಿದ್ದರಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ಒಮ್ಮೆ ಬಿಜೆಪಿಗೆ ಹೋಗಿದ್ದರಿಂದ ಜನರು ಸೋಲಿಸಿದರು. ಅಂದೇನಾದರೂ ಗೆದ್ದಿದ್ದರೆ ಉಪ ಮುಖ್ಯಮಂತ್ರಿ ಆಗುತ್ತಿದ್ದೆ’ ಎಂದು ಜಿ.ಟಿ. ದೇವೇಗೌಡ ಹೇಳಿದರು. ‘ಹುಣಸೂರು ಜನರೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ನಾನು ಹುಣಸೂರು ಬಿಟ್ಟು ಬಂದರೂ ಒಂದು ಕಣ್ಣು ಅತ್ತ ಇರುತ್ತದೆ. ಅಲ್ಲಿನ ಜನರು ನನ್ನ ಪತ್ನಿಯನ್ನು ಜಿಲ್ಲಾ ಪಂಚಾಯಿತಿಗೆ ಕಳುಹಿಸಿದ್ದರು. ಈಗ ಮಗನನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.