ADVERTISEMENT

ಇನ್ನೆಷ್ಟು ದಿನ ‘ಅತಿಥಿ’ಗಳಾಗಿಯೇ ಇರಬೇಕು

ಅತಿಥಿ ಉಪನ್ಯಾಸಕರ ಪ್ರಶ್ನೆ, ಸೇವಾ ಭದ್ರತೆ ಒದಗಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:33 IST
Last Updated 24 ಸೆಪ್ಟೆಂಬರ್ 2020, 3:33 IST
ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಸೇವಾ ಭದ್ರತೆಗೆ ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು
ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಸೇವಾ ಭದ್ರತೆಗೆ ಆಗ್ರಹಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಅವರನ್ನು ಸೇವೆಯಿಂದ ಕೈ ಬಿಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ 413 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಇದ್ದಾರೆ. ಇನ್ನೆಷ್ಟು ದಿನ ನಾವು ಅತಿಥಿಗಳಾಗಿಯೇ ಇರಬೇಕು’ ಎಂದು ಪ್ರಶ್ನಿಸಿದರು.

ಯುಜಿಸಿ 2019ರಲ್ಲೇ ಅತಿಥಿ ಉಪನ್ಯಾಸಕರಿಗೆ ಒಂದು ಬೋಧನಾ ಅವಧಿಗೆ ₹1,500 ಅಥವಾ ಮಾಸಿಕ ₹50 ಸಾವಿರದವರೆಗೆ ವೇತನ ನೀಡಬೇಕು ಎಂದು ಸುತ್ತೋಲೆ ಹೊರಡಿಸಿದೆ. ಆದರೆ, ರಾಜ್ಯದಲ್ಲಿ ಪಿ.ಎಚ್‌ಡಿ ಮಾಡಿದವರಿಗೆ ₹13 ಸಾವಿರ ಹಾಗೂ ಉಳಿದವರಿಗೆ ₹11 ಸಾವಿರ ಮಾತ್ರ ನೀಡಲಾಗುತ್ತಿದೆ. ಈ ಹಣವನ್ನು ಲಾಕ್‌ಡೌನ್‌ ಘೋಷಣೆಯಾದ ನಂತರ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕಳೆದ 5 ತಿಂಗಳಿಂದ ವೇತನ ಇಲ್ಲದೇ ಅತಿಥಿ ಉಪನ್ಯಾಸಕರು ಉದ್ಯೋಗ ಖಾತರಿ ಕೆಲಸಕ್ಕೆ, ತರಕಾರಿ ಮಾರಾಟಕ್ಕೆ ಇಳಿದಿದ್ದಾರೆ. 15 ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಮೊದಲು ಸೇವಾಭದ್ರತೆ ಒದಗಿಸಬೇಕು. ಬಾಕಿ ಇರುವ ವೇತನವನ್ನು ಶೀಘ್ರದಲ್ಲಿ ಪಾವತಿಸಬೇಕು. ಲಾಕ್‌ಡೌನ್‌ ಅವಧಿಯನ್ನು ಕೆಲಸದ ಅವಧಿ ಎಂದು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ನಂಜುಂಡಸ್ವಾಮಿ, ಸುನಿಲ್, ಅಣ್ಣಪ್ಪ, ಸತೀಶ್, ಅನಿತಾ, ರಮ್ಯಾ, ಹರೀಶ್, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.