ADVERTISEMENT

ಜಯಪುರ: ಸಂಭ್ರಮದ ಗುಜ್ಜಮ್ಮ ತಾಯಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:55 IST
Last Updated 28 ಮಾರ್ಚ್ 2024, 15:55 IST
ಜಯಪುರ ಗ್ರಾಮದೇವತೆ ಗುಜ್ಜಮ್ಮತಾಯಿಯವರ ರಥೋತ್ಸವವು ಗುರುವಾರ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು
ಜಯಪುರ ಗ್ರಾಮದೇವತೆ ಗುಜ್ಜಮ್ಮತಾಯಿಯವರ ರಥೋತ್ಸವವು ಗುರುವಾರ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು   

ಜಯಪುರ: ಜಯಪುರ ಗ್ರಾಮದಲ್ಲಿ ಗುರುವಾರ ಗ್ರಾಮದೇವತೆ ಗುಜ್ಜಮ್ಮತಾಯಿಯವರ ಜಾತ್ರಾ ಮಹೋತ್ಸವ ಪ್ರಯುಕ್ತ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಭಕ್ತರು ದೇವಿಗೆ ಹರಕೆ ಸೀರೆ ಮತ್ತು ಹೂವು, ಹೊಂಬಾಳೆ ಸಮರ್ಪಸಿದರು.

ಗ್ರಾಮದ ಗಂಗಾ ಸ್ಥಾನವಾದ ಕೆಗ್ಗೆರೆಯಲ್ಲಿ ಗುಜ್ಜಮ್ಮ ತಾಯಿ, ಮಲೆಯ ಋಷಿ ಕೊಣಪ್ಪ ಸ್ವಾಮಿ, ಕೆಂಗಲಮ್ಮ, ಚಿಕ್ಕ ದೇವಮ್ಮ ದೇವರುಗಳ ಬಿರುದು ಬಾವಲಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಬಾರಿ ಗಾತ್ರದ ಹೂವಿನ ಅಲಂಕಾರಗೊಂಡ ರಥೋತ್ಸವಕ್ಕೆ ಚಾಲನೆ ದೊರೆಯಿತು. ಗುಜ್ಜಮ್ಮ ತಾಯಿಯ ಮೂರ್ತಿಯನ್ನು ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಯಿತು. ಬಾಲಕಿಯರು ಹಾಲಾರವಿ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ನೂರಾರು ಭಕ್ತರು ಬಾಯಿಗೆ ಬೀಗ ಹಾಕಿಸಿಕೊಂಡು ದೇವಿಯ ಹರಕೆ ತೀರಿಸಿದರು. ತಮಟೆಯ ಸದ್ದಿಗೆ ಬರಡನಪುರ ಗ್ರಾಮಸ್ಥರು ನಂದಿ ಕಂಬವನ್ನು ಹೊತ್ತು ಕುಣಿದರು.

ಮಧ್ಯಾಹ್ನ ಒಂದು ಗಂಟೆಗೆ ಪ್ರಾರಂಭವಾದ ರಥೋತ್ಸವ ಮೆರವಣಿಗೆಯು ಸಂಜೆ ಐದು ಗಂಟೆಗೆ ದೇವಾಲಯ ಆವರಣ ತಲುಪಿತು. ರಥೋತ್ಸವ ನೋಡಲು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರು. ಹರಕೆಹೊತ್ತ ಭಕ್ತರು ಮಜ್ಜಿಗೆ, ಪಾನಕ, ಹಣ್ಣುಗಳು ಮತ್ತು ನೀರಿನ ಬಾಟಲಿಗಳನ್ನು ವಿತರಿಸಿದರು.

ADVERTISEMENT

ರಥೋತ್ಸವ ದೇವಾಲಯ ತಲುಪಿದ್ದಂತೆ ಮಹಾಮಂಗಳಾರತಿ ನೆರವೇರಿತು. ಭಕ್ತರು ಮಡೆಯನ್ನು ಬೇಯಿಸಿ, ನೈವೇಧ್ಯವನ್ನು ದೇವಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು. ಮಲೆಯ ಋಷಿ ಕೊಣಪ್ಪ ಸ್ವಾಮಿಯವರ ಶ್ವೇತವಸ್ತ್ರ ಸತ್ತಿಗೆಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.