ADVERTISEMENT

ಆರ್ಥಿಕ ಶಿಸ್ತು ಹಾಳುಗೆಡವಿದ ಕಾಂಗ್ರೆಸ್ಸಿಗರು; ಮಾಜಿ ಸಚಿವ ಎಚ್‌.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 8 ಮೇ 2020, 15:15 IST
Last Updated 8 ಮೇ 2020, 15:15 IST

ಮೈಸೂರು: ‘ರಾಜ್ಯದ ಆರ್ಥಿಕ ಶಿಸ್ತನ್ನು ಹಾಳುಗೆಡವಿದವರೇ ಕಾಂಗ್ರೆಸ್ಸಿಗರು’ ಎಂದು ಬಿಜೆಪಿ ಮುಖಂಡ ಅಡಗೂರು ಎಚ್‌.ವಿಶ್ವನಾಥ್ ಶುಕ್ರವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅಹಿಂದ ವರ್ಗಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳುವ ನೈತಿಕತೆ ಕಾಂಗ್ರೆಸ್‌ ನಾಯಕರಿಗಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಕುಟುಕಿದರು.

‘ಲಾಕ್‌ಡೌನ್‌ನಿಂದ ದೇಗುಲ, ಚರ್ಚ್‌, ಮಸೀದಿಗಳು ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಅರ್ಚಕರು, ಮುಲ್ಲಾಗಳು, ಮೌಲ್ವಿಗಳು, ಫಾದರ್‌ಗಳಿಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಇದರ ಜತೆಯಲ್ಲೇ ಇದೀಗ ಪ್ರಕಟಗೊಂಡಿರುವ ಪ್ಯಾಕೇಜ್‌ನಿಂದ ಹೊರಗುಳಿದಿರುವ ವಿವಿಧ ತಳ ಸಮುದಾಯಗಳಿಗೂ ನೆರವು ಒದಗಿಸಬೇಕು’ ಎಂದು ವಿಶ್ವನಾಥ್ ಮನವಿ ಮಾಡಿದರು.

ADVERTISEMENT

ಅವಸರ ಬೇಡ; ತಜ್ಞರ ಜತೆ ಚರ್ಚಿಸಿ

‘ಪಠ್ಯ ಕಡಿತದ ವಿಷಯದಲ್ಲಿ ಐಎಎಸ್‌, ಕೆಎಎಸ್ ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಬಾರದು. ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಆಲಿಸಬೇಕು’ ಎಂದು ಮಾಜಿ ಶಿಕ್ಷಣ ಸಚಿವರೂ ಆದ ಬಿಜೆಪಿ ಮುಖಂಡ ಅಡಗೂರು ಎಚ್.ವಿಶ್ವನಾಥ್ ಒತ್ತಾಯಿಸಿದರು.

‘ಯಾವೊಂದು ನಿರ್ಧಾರವನ್ನು ಅವಸರಕ್ಕೆ ಪ್ರಕಟಿಸಿ ಪೋಷಕರು, ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಬೇಡಿ. ಪ್ರತಿ ಬಾರಿಯೂ ಶಿಕ್ಷಣ ಕ್ಷೇತ್ರದ ತಜ್ಞರ ಜತೆ ಒಮ್ಮೆ ಚರ್ಚಿಸಿ’ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌ಗೆ ಕಿವಿಮಾತು ಹೇಳಿದರು.

‘ಆನ್‌ಲೈನ್‌ನಲ್ಲಿ ಪಾಠ ಮಾಡುವುದು ಸುಲಭವಲ್ಲ. ಸ್ಮಾರ್ಟ್‌ಫೋನ್‌ ಹೊಂದಿರುವವರು ಇಂದಿಗೂ ಶೇ 23 ಜನರಿದ್ದಾರಷ್ಟೇ. ಶಾಲಾ ಆವರಣದಲ್ಲೇ ಪಾಠ ಮಾಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.