ADVERTISEMENT

ಸಿದ್ದರಾಮಯ್ಯನವರೇ ಗೌರವ ಹಾಳು ಮಾಡಿಕೊಳ್ಳಬೇಡಿ: ಎ.ಎಚ್‌. ವಿಶ್ವನಾಥ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 14:29 IST
Last Updated 2 ಜನವರಿ 2025, 14:29 IST
ಎ.ಎಚ್‌.ವಿಶ್ವನಾಥ್‌
ಎ.ಎಚ್‌.ವಿಶ್ವನಾಥ್‌   

ಮೈಸೂರು: ‘ಸಿಐಟಿಬಿ ದಾಖಲೆ ಪ್ರಕಾರ, ನಗರದ ಕೆಆರ್‌ಎಸ್‌ ರಸ್ತೆಗೆ ಪ್ರಿನ್ಸೆಸ್‌ ರಸ್ತೆ ಎಂಬ ಹೆಸರಿದೆ. ಮುಖ್ಯಮಂತ್ರಿಗಳೇ ಭಟ್ಟಂಗಿಗಳು, ಚಮಚಾಗಳು, ಶಿಷ್ಯರಿಂದ ಹೆಸರು ಹಾಳು ಮಾಡಿಕೊಳ್ಳಬೇಡಿ. ಆ ರಸ್ತೆ ನಾಮಕರಣ ವಿಚಾರದಲ್ಲಿ  ಮುಂದುವರಿಯದಂತೆ ನಿಮ್ಮವರಿಗೆ ಸೂಚಿಸಿ’ ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್‌. ವಿಶ್ವನಾಥ್‌ ಸಲಹೆ ನೀಡಿದರು.

‘ಮುಖ್ಯಮಂತ್ರಿ ಆರೋಗ್ಯ ಮಾರ್ಗ’ ನಾಮಕರಣ ಪ್ರಸ್ತಾಪದ ಬಗ್ಗೆ ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಅವರು, ‘ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರು ಒಂದು ದಿನವೂ ಅದರಲ್ಲಿ ಕೂರಲಿಲ್ಲ. ಹೀಗಿರುವಾಗ, ರಸ್ತೆಗೆ ಹೆಸರಿಟ್ಟುಕೊಂಡು ಏನು ಮಾಡುತ್ತೀರಾ’ ಎಂದು ಪ್ರಶ್ನಿಸಿದರು.

‘ಅಕ್ಕಿ ಕೊಟ್ಟ ನಿಮ್ಮನ್ನು ಜನರು ಅನ್ನರಾಮಯ್ಯ ಎನ್ನುತ್ತಾರೆ. ಸುಮ್ಮನೆ ಹೆಸರು ಕೆಡಿಸಿಕೊಳ್ಳಬೇಡಿ. ನಾಲ್ಕು ದಶಕಗಳಿಂದ ಕಾಪಾಡಿಕೊಂಡು ಬಂದಿರುವ ಹೆಸರಿನ ಗೌರವವನ್ನು ಭಟ್ಟಂಗಿಗಳಿಂದಾಗಿ ಹಾಳು ಮಾಡಿಕೊಳ್ಳಬೇಡಿ. ಮುಡಾ ನಿವೇಶನ ವಿಷಯದಲ್ಲಿ ನಿಮ್ಮ ಹೆಸರು ಹಾಳು ಮಾಡಿದ್ದರಿಂದ ಒಮ್ಮೆ ನೊಂದಿದ್ದೀರಾ. 50:50 ಅನುಪಾತದಲ್ಲಿ ಭೂಮಿ ನುಂಗಿದವರಿಂದಲೇ ನಿಮ್ಮ ಹೆಸರು ಕೆಡಲು ಕಾರಣವಾಗಿದೆ. ಈಗ ಮತ್ತೆ ಅಂಥವರ ಮಾತು ಕೇಳಬೇಡಿ’ ಎಂದು ಹೇಳಿದರು.

ADVERTISEMENT

‘ಕೆಲವು ಕಾಂಗ್ರೆಸ್ ಮುಖಂಡರು, ವಕ್ತಾರರು ಸಂಸದ ಯದುವೀರ್ ಬಗ್ಗೆ ಅಗೌರವವಾಗಿ ಮಾತನಾಡಿರುವುದು ಸರಿಯಲ್ಲ. ಇತಿಹಾಸ ಗೊತ್ತಿಲ್ಲದಿದ್ದರೆ ಸುಮ್ಮನೆ ಇರಬೇಕೇ ಹೊರತು ಬಾಯಿಗೆ ಬಂದಂತೆ ಏನೇನೋ ಮಾತನಾಡಬಾರದು. ಯದುವಂಶದ ಬಗ್ಗೆ ಮಾತನಾಡಿದರೆ ಸಣ್ಣವರಾಗುವುದು ಮಾತನಾಡುವವರೇ. ಭಟ್ಟಂಗಿಗಳು ಹೇಳುವ ಮಾತನ್ನು ಕೇಳದೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಈ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

‘ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿಚಾರದಲ್ಲಿ ಸ್ಥಳ ಮಹಜರು ಮಾಡುತ್ತೇನೆಂದು ಪೊಲೀಸರು ಹೇಳುತ್ತಿರುವುದು ನಾಚಿಕೆಗೇಡು. ಈಗಾಗಲೇ ಸಭಾಪತಿಯು, ಅದು ಮುಗಿದ ಅಧ್ಯಾಯ ಎಂದಿದ್ದಾರೆ. ಪೊಲೀಸರು ಕುರ್ಚಿ, ಟೇಬಲ್ ನೋಡಿಕೊಂಡು ಮಹಜರು ಮಾಡುತ್ತಾರೆಯೇ? ಅಧಿವೇಶನದ ಘನತೆ, ಗೌರವ, ಪರಂಪರೆಯನ್ನು ಹಾಳು ಮಾಡಲಾಗಿದೆ. ವಿಧಾನಸೌಧದ ಒಳಗೆ ಮತ್ತು ಕಾರಿಡಾರ್‌ನಲ್ಲಿ ಪೊಲೀಸರು ಬರಬಾರದೆಂದು ಮಾರ್ಶಲ್‌ಗಳನ್ನು ನೇಮಕ ಮಾಡಲಾಗಿದೆ. ಹೀಗಿದ್ದರೂ, ಯಾವ ಮಹಜರು ಮಾಡುತ್ತಾರೆ?’ ಎಂದು ಕೇಳಿದರು.

‘ನಟ ಶಿವರಾಜಕುಮಾರ್ ಕ್ಯಾನ್ಸರ್‌ನಿಂದ ಮುಕ್ತಿ ಹೊಂದಿರುವುದು ಸಂತಸದ ವಿಷಯ. ನಾಡಿನ ಜನರ ಹಾರೈಕೆಯಿಂದ ಆರೋಗ್ಯವಾಗಿ ಹಿಂತಿರುಗಬೇಕು. ಮುಂದಿನ ದಿನಗಳಲ್ಲಿ ಎಂದಿನಂತೆ ಚಲನಚಿತ್ರಗಳಲ್ಲಿ ನಟಿಸಬೇಕು’ ಎಂದು ಹಾರೈಸಿದರು.

‘ಆರ್ಥಿಕ ಪರಿಸ್ಥಿತಿ: ಶ್ವೇತ‍ಪತ್ರ ಬಿಡುಗಡೆ ಮಾಡಿ’

‘ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಹಣಕಾಸಿನ ಸ್ಥಿತಿ ಅಧೋಗತಿಗೆ ತಲುಪಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು’ ಎಂದು ಎ.ಎಚ್‌. ವಿಶ್ವನಾಥ್‌ ಆಗ್ರಹಿಸಿದರು. ‘ರಾಜ್ಯದ ಹಣಕಾಸಿನ ಪರಿಸ್ಥಿತಿ ಮುಗ್ಗುರಿಸಿಬಿದ್ದಿದೆ. ವಿರೋಧಪಕ್ಷದ ಸ್ಥಾದಲ್ಲಿರುವ ಬಿಜೆಪಿ ನಾಯಕರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವ ಬಗ್ಗೆ ಆರ್ಥಿಕ ತಜ್ಞ ಮೋಹನ್ ದಾಸ್ ಪೈ ಆತಂಕದಿಂದ ಮಾತನಾಡಿದ್ದಾರೆ. ಆರ್ಥಿಕ ಬಿಕ್ಕಟ್ಟು ಸರ್ಕಾರದ ಕುತ್ತಿಗೆ ಹಿಸುಕುತ್ತಿದೆ’ ಎಂದು ಆರೋಪಿಸಿದರು. ‘ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಗೆ ₹2 ಸಾವಿರ ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಸಾಲ ಮರುಪಾವತಿಸಲು ಪರದಾಡುತ್ತಿರುವ ಕಾರಣ ಸಾಲ ಮಂಜೂರಾಗಲಿದೆಯೇ ಅಥವಾ ಇಲ್ಲವೇ ನೋಡಬೇಕು. ಶೇ 18ರಷ್ಟು ಬಡ್ಡಿ ಕಟ್ಟಬೇಕಿದೆ. ಸಿದ್ದರಾಮಯ್ಯ ಅವರ ಕೊಡುಗೆಗಳಿಂದ ರಾಜ್ಯ ಅಧೋಗತಿಗೆ ಬಂದಿದೆ’ ಎಂದು ವಾಗ್ದಾಳಿ ನಡೆಸಿದರು.

‘ಏನಾದರೂ ಸುಧಾರಣೆ ಆಗಿದೆಯೇ?’

‘ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಬಜೆಟ್ ಮಂಡಿಸಲು ಸಿದ್ಧವಾಗುತ್ತಿದ್ದಾರೆ. ಆದರೆ ಕಳೆದ ವರ್ಷ ಏನು ಬದಲಾವಣೆ ಮಾಡಿದ್ದಾರೆ ಏನಾದರೂ ಸುಧಾರಣೆ ತಂದಿದ್ದಾರೆಯೇ? ಹೊಸತನದಿಂದ ಆದಾಯ ತಂದಿದ್ದಾರೆಯೇ? ಹಣಕಾಸು ಸ್ಥಿತಿ ಬಗ್ಗೆ ಜನರ ಮುಂದೆ ಸತ್ಯಹೇಳಬೇಕೇ ಹೊರತು ಮುಚ್ಚಿಟ್ಟುಕೊಳ್ಳಬಾರದು’ ಎಂದು ಎ.ಎಚ್‌. ವಿಶ್ವನಾಥ್‌ ಹೇಳಿದರು. ‘ಮುಖ್ಯಮಂತ್ರಿಗೆ ಅಧಿಕಾರಿಗಳ ಮೇಲೆ ಹಿಡಿತ ತಪ್ಪಿದೆ. ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ರೂಪಾ ಬೀದಿ ಜಗಳ ಮಾಡಿಕೊಂಡಿದ್ದರೂ ಅವರ ಮೇಲೆ ಶಿಸ್ತು ಕ್ರಮಜರುಗಿಸಿಲ್ಲವೇಕೆ? ಕೇಂದ್ರ ಸೇವೆಗೆ ವಾಪಸ್ ಕಳುಹಿಸದೆ ಇಲ್ಲೇಕೆ ಇರಿಸಿಕೊಳ್ಳಲಾಗಿದೆ? ಆಡಳಿತದಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.