ADVERTISEMENT

ಮುಖ್ಯಮಂತ್ರಿ ಬದಲಾಗಲೇಬೇಕು: ಎಚ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 14:15 IST
Last Updated 5 ಜುಲೈ 2021, 14:15 IST
ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌
ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌   

ಮೈಸೂರು: ‘ಮುಖ್ಯಮಂತ್ರಿ ಬದಲಾಗಲೇಬೇಕು. ಇದರ ಪ್ರಕ್ರಿಯೆ ನಡೆದಿದೆ. ಫಲ ಬರುವುದು ಸ್ವಲ್ಪ ತಡವಾಗಬಹುದು. ಆದರೆ ಬದಲಾವಣೆ ಖಂಡಿತ’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಸೋಮವಾರ ಇಲ್ಲಿ ತಿಳಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಅವರು, ‘ವಿಜಯೇಂದ್ರನ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಹಿಂದುಳಿದ ನಾಯಕರನ್ನು ತುಳಿಯುವ ಕೆಲಸ ನಡೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ದು ವಿಜಯೇಂದ್ರ. ಇದೀಗ ರಮೇಶ ಜಾರಕಿಹೊಳಿ, ಶ್ರೀರಾಮುಲು ಸರದಿ’ ಎಂದರು.

‘ಯಡಿಯೂರಪ್ಪ ಅವರನ್ನು ಟೀಕಿಸುವವರು, ಅವರ ಕಾಲಿನ ದೂಳಿಗೂ ಸಮರಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿರುವುದಕ್ಕೆ ತಿರುಗೇಟು ನೀಡಿದ ವಿಶ್ವನಾಥ್, ‘ನೀನು ಬೇಕಾದರೆ ಯಡಿಯೂರಪ್ಪ ಪಾದ ನೆಕ್ಕು. ಅವರ ಮಗನ ಭ್ರಷ್ಟಾಚಾರ, ಅವ್ಯವಹಾರ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವಾ?’ ಎಂದು ಕಿಡಿಕಾರಿದರು.

‘ರಾಜ್ಯದಲ್ಲಿ ಬಿಜೆಪಿಗೆ 104 ಸ್ಥಾನ ಬಂದಿದ್ದು, 25 ಸಂಸದರು ಗೆದ್ದಿದ್ದು ಯಡಿಯೂರಪ್ಪ ಅವರಿಂದ ಅಲ್ಲ. ಇದು ಪ್ರಧಾನಿ ನರೇಂದ್ರ ಮೋದಿಯಿಂದ ಆಗಿದ್ದು’ ಎಂದು ವಿಶ್ವನಾಥ್‌ ಗುಡುಗಿದರು.

ರೆಬೆಲ್‌ ಸಂಸದೆ
ಸಂಸದರಾದ ಸುಮಲತಾ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ‘ನಿಮ್ಮ ಮಗನ ಸೋಲಿನ ಸೇಡನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದೀರಾ? ಸುಮಲತಾ ರೆಬೆಲ್ ಆ್ಯಕ್ಟರ್, ರೆಬೆಲ್ ಸಂಸದೆ. ಮಂಡ್ಯದ ಸೊಸೆ. ರೆಬೆಲ್‌ ಸ್ಟಾರ್ ಅಂಬರೀಶ್ ಧರ್ಮಪತ್ನಿ. ಇಂತಹ ಹೆಣ್ಣು ಮಗಳಿಗೆ ಅವಮಾನ ಮಾಡುತ್ತೀರಾ?’ ಎಂದು ಕಿಡಿಕಾರಿದರು.

‘ಎರಡು ಬಾರಿ ಮುಖ್ಯಮಂತ್ರಿ ಆದವರ ಬಾಯಲ್ಲಿ ಇಂತಹ ಮಾತು ಬರಬಾರದು. ಅಣೆಕಟ್ಟಿನ ಸಮಸ್ಯೆ ಇದ್ದರೆ, ಪರಿಶೀಲಿಸೋಣ ಅಂತಾ ಹೇಳಿ. ಅದನ್ನು ಬಿಟ್ಟು ಹೆಣ್ಣು ಮಗಳನ್ನು ಮಲಗಿಸಿ ಅಂದರೇ ಏನು ಭಾಷೆಯದು? ಮಿಸ್ಟರ್ ಕುಮಾರಸ್ವಾಮಿ, ಮೈಂಡ್ ಯುವರ್ ಲಾಂಗ್ವೇಜ್’ ಎಂದು ವಿಶ್ವನಾಥ್‌ ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.