ADVERTISEMENT

ಬಿಎಸ್‌ವೈ ಬೆಂಬಲಕ್ಕೆ ನಿಂತಿರುವ ಸ್ವಾಮೀಜಿಗಳ ವಿರುದ್ಧ ಎಚ್.ವಿಶ್ವನಾಥ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 9:09 IST
Last Updated 21 ಜುಲೈ 2021, 9:09 IST
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್   

ಮೈಸೂರು: 'ಯಡಿಯೂರಪ್ಪ ಪರ ನಿಂತಿರುವ ಸ್ವಾಮೀಜಿಗಳು ಬೀದಿಗೆ ಬಂದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ಪರ ನಿಂತು ರಾಜಕಾರಣದಲ್ಲಿ ತೊಡಗಿದ್ದಾರೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

'ಯಡಿಯೂರಪ್ಪ ಬದಲಾವಣೆಗೆ ಮುಖ್ಯ ಕಾರಣ ಭ್ರಷ್ಟಾಚಾರ. ಮಠಾಧಿಪತಿಗಳು ಜನರಿಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತಿದ್ದೀರಾ? ಸ್ವಾಮೀಜಿಗಳನ್ನು ಬೀದಿಗೆ ತಂದು ತಮ್ಮ ಪರ ಮಾತಾಡಿ ಎನ್ನುವುದೂ ತಪ್ಪು. ಇದು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ಸಮುದಾಯದವರು ಮುಖ್ಯಮಂತ್ರಿ ಆಗಬೇಕು. ಆದರೆ, ಅವರು ಜಾತಿವಂತನಾಗಬಾರದು ನೀತಿವಂತನಾಗಬೇಕು' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

'ಸರ್ಕಾರ ಹಾದಿ ತಪ್ಪಿದ ಸಮಯದಲ್ಲಿ ಎಲ್ಲರೂ ಎಚ್ಚರಿಸುತ್ತಾರೆ. ವಿರೋಧ ಪಕ್ಷ, ಸಮಾಜ, ಸಂಘ ಸಂಸ್ಥೆಗಳು, ಮಠಾಧೀಶರು ಬುದ್ಧಿ ಹೇಳುತ್ತಾರೆ. ಆದರೆ, ಎಚ್ಚರಿಸಬೇಕಾದವರೆ. ರಾಜಕಾರಣಿಗಳಿಗಿಂತ‌ ಮೀರಿದ ಪಾತ್ರ ವಹಿಸುತ್ತಿರುವುದು ಎಷ್ಟು ಸರಿ' ಎಂದು ಪ್ರಶ್ನಿಸಿದರು. 'ಮಠ ಮಾನ್ಯಗಳು, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕೇ ಹೊರತೂ ರಾಜಕಾರಣದ, ಅಧಿಕಾರದ ಭಾಗವಾಗಬಾರದು. ನಡೆದಾಡುವ ದೇವರಾಗಬೇಕೇ ಹೊರತೂ ನಡೆದಾಡುವ ರಾಜಕಾರಣಿಗಳಾಗಬಾರದು. ಇದು ಜನತಂತ್ರ ವ್ಯವಸ್ಥೆಗೆ ಮಾರಕ ಎಂದು ತಿಳಿಸಿದರು.

ADVERTISEMENT

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಪೀಠದ ಸ್ವಾಮೀಜಿ ಈ ರೀತಿ ಬಾಲಿಶವಾಗಿ ಮಾತನಾಡಿದ್ದರು. ಅವತ್ತು ಕೂಡ ನಾನು ಅದನ್ನು ಖಂಡಿಸಿದ್ದೆ. ಈಗಲೂ ಮಠಾಧೀಶರನ್ನು ಕೈ‌ ಮುಗಿದು ಕೇಳುವೆ. ಧರ್ಮದಲ್ಲಿ ರಾಜಕಾರಣ ತರಬೇಡಿ' ಎಂದರು.

'ಬಹಳ‌ ನೋವಿನ ವಿಚಾರವೆಂದರೆ ಬಸವಶ್ರೀ ಪ್ರಶಸ್ತಿ ಕೊಡಮಾಡುವ ಮುರುಘಾಶ್ರೀಗಳು ಬೀದಿಗೆ ಬಂದು ರಾಜಕಾರದ ಬಗ್ಗೆ ಮಾತನಾಡುತ್ತಿರುವುದು. ಹಾಗಾದರೆ ಈ ಪ್ರಶಸ್ತಿಗೆ ಏನು ಬೆಲೆ? ಬಸವಣ್ಣ ಯಾವತ್ತು ಜಾತಿ ರಾಜಕಾರಣ ಮಾಡಿದರು? ಸರ್ಕಾರದ ಕೆಲಸ ದೇವರ ಕೆಲಸ ಎಂಬುದು ಈಗ ಸರ್ಕಾರಿ ಕೆಲಸ ಸ್ವಾಮೀಜಿಗಳ ಕೆಲಸ ಎಂಬಂತಾಗಿದೆ' ಎಂದು ಟೀಕಿಸಿದರು.

'ಯಡಿಯೂರಪ್ಪ ಜನನಾಯಕ, ಆ ಬಗ್ಗೆ ಮೆಚ್ಚುಗೆ ಇದೆ. ಆದರೆ, ಸರ್ಕಾರ ಬಂದಿದ್ದು ಹೇಗೆ? ಮೊದಲನೇ ಬಾರಿ ಸ್ವಯಂಕೃತ ಅಪರಾಧದಿಂದ ಜೈಲಿಗೆ ಹೋದಿರಿ. ಆಗಲೂ ಗೌರವಯುತ ನಿರ್ಗಮನ ಸಿಗಲಿಲ್ಲ. 6 ವರ್ಷ ಅಮಾನತು ಮಾಡಲಾಯಿತು. ಆಗ ಏಕೆ‌‌ ಯಾವ ಸ್ವಾಮೀಜಿಗಳು ಮಾತನಾಡಲಿಲ್ಲ, ಬೀದಿಗೆ ಬರಲಿಲ್ಲ' ಎಂದು ಕೇಳಿದರು.

'ಜೆಡಿಎಸ್, ಕಾಂಗ್ರೆಸ್ ತ್ಯಜಿಸಿ ಬಂದ ನಾವು 17 ಶಾಸಕರು ಲಿಂಗಾಯತರಲ್ಲ. ಕೇವಲ ಇಬ್ಬರು ಲಿಂಗಾಯತರು, ಉಳಿದವರು ಬೇರೆ ಜಾತಿಯವರು. ಅವತ್ತು ನಾವು ಯಾರೂ ಜಾತಿ ನೋಡಲಿಲ್ಲ. ಯಡಿಯೂರಪ್ಪ ಹೋರಾಟಗಾರ ಎಂದು ಅಧಿಕಾರ‌ ನೀಡಿದೆವು. ನಾಲಿಗೆಯ ಮೇಲೆ‌ ನಿಂತ ನಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆವು. ಆದರೆ, ಮುಂದೆ ತಾವು ನಾಲಿಗೆ, ಕೈ ಎರಡನ್ನೂ ಮಗನಿಗೆ ನೀಡಿದಿರಿ' ಎಂದು ಬೇಸರ ವ್ಯಕ್ತಪಡಿಸಿದರು.

'ಭ್ರಷ್ಟ ಸರ್ಕಾರ ಹೋಗಬೇಕು ಎಂಬುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇತ್ತ ಶ್ಯಾಮನೂರ ಶಿವಶಂಕರಪ್ಪ ಹಾಗೂ ಎಂ.ಬಿ.ಪಾಟೀಲ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಇವರಿಬ್ಬರು ಬಡವ ಲಿಂಗಾಯತನಿಗೆ ಏನು ಸಹಾಯ ಮಾಡಿದ್ದಾರೆ? ಇವರು ಶಿಕ್ಷಣದ ವ್ಯಾಪಾರಿಗಳು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.